ಬರಾಕ್ ಒಬಾಮ ಅವರು ಅಮೆರಿಕದ ಅಧ್ಯಕ್ಷರು, ಜಗತ್ತಿನ ಪ್ರಭಾವಿ ವ್ಯಕ್ತಿಯಾಗಿದ್ದರೂ ಕೂಡ ಮನೆಯಲ್ಲಿ ಮಾತ್ರ 'ಹೋಮ್ ಮಿನಿಷ್ಟರ್' (ಮಿಶೆಲ್) ಅವರೇ ಸುಪ್ರೀಂ ಅಂತೆ!
'ನೀವು ಮತ್ತು ಒಬಾಮ ಕಚ್ಚಾಡಿಕೊಂಡಾಗ ಸೋಲುವುದು ಯಾರು?...ವಿಶೆಲ್ ಅವರು ರಾಷ್ಟ್ರೀಯ ಕರಕುಶಲ ವಸ್ತುಗಳ ಸಂಗ್ರಹಾಲಯಕ್ಕೆ ಸೋಮವಾರ ಭೇಟಿ ನೀಡಿದಾಗ ಈ ಪ್ರಶ್ನೆ ಮುಗ್ದ ವಿದ್ಯಾರ್ಥಿನಿಯೊಬ್ಬಳಿಂದ ತೂರಿಬಂದದ್ದು . ಅದಕ್ಕೆ ಉತ್ತರಿಸಿದ ಅವರು, ಯಾವಾಗಲೂ ಒಬಾಮ ಅವರೇ ಕ್ಷಮೆ ಕೇಳುವುದನ್ನು ನಾನು ಎದುರು ನೋಡುತ್ತೇನೆ. ಯಾಕೆಂದರೆ ನಾನು ಮಹಿಳೆಯಲ್ಲವೆ ಎಂದು ನಕ್ಕರು.
ಸಂಗ್ರಹಾಲಯದ ಅಧ್ಯಕ್ಷೆ ರುಚಿರಾ ಘೋಷ್ ಅವರು ಮಿಶೆಲ್ ಅವರಿಗೆ ಕರಕುಶಲ ವಸ್ತುಗಳ ವಿವರ ನೀಡಿದರು. ಭಾರತದಲ್ಲಿಯ ಅಮೆರಿಕ ರಾಯಭಾರಿ ಟಿಮೊತಿ ರೋಮರ್ ಅವರ ಪತ್ನಿ ಸೆಲ್ಲಿ ಅವರು ಕೂಡ ಜತೆಯಲ್ಲಿದ್ದರು. ಮಿಶೆಲ್ ಅವರು ಸುಮಾರು 2 ಗಂಟೆ 20 ನಿಮಿಷಗಳವರೆಗೆ ವಸ್ತುಸಂಗ್ರಹಾಲಯದಲ್ಲಿ ಇದ್ದರು. ಭೇಟಿ ಸಮಯದಲ್ಲಿ ಅವರು ಹಲವಾರು ಕರಕುಶಲ ವಸ್ತುಗಳನ್ನು ಖರೀದಿಸಿದರು.
ಈ ಸಂದರ್ಭದಲ್ಲಿ 10-13 ವರ್ಷದೊಳಗಿನ ವಿದ್ಯಾರ್ಥಿನಿಯರು ಅವರ ಜತೆಯಲ್ಲಿದ್ದರು. ಕರಕುಶಲ ವಸ್ತುಗಳನ್ನು ವೀಕ್ಷಿಸಿ ಭಾರತದ ವಿಭಿನ್ನ ಸಂಸ್ಕೃತಿಯ ಪರಿಚಯ ಮಾಡಿಕೊಂಡರು ಹಾಗೂ ದುರ್ಗಾ ದೇವತೆಯ ಮೂರ್ತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೇ, ಪ್ರತಿಯೊಬ್ಬ ಮಹಿಳೆಯೂ ಮತ್ತೊಬ್ಬ ಮಹಿಳೆಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಜತೆಗಿನ ಮಾತುಕತೆ ವೇಳೆ ಸಲಹೆ ನೀಡಿದರು.
ಇಂಡೋನೇಷ್ಯಾಕ್ಕೆ ಪ್ರಯಾಣ ಬೆಳೆಸಿದ ಒಬಾಮ ದಂಪತಿಗಳು ಮೂರು ದಿನಗಳ ಕಾಲ ಭಾರತ ಪ್ರವಾಸದ ನಂತರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಿಶೆಲ್ ಒಬಾಮ ಮಂಗಳವಾರ ಬಿಗಿ ಭದ್ರತೆಯಲ್ಲಿ ಭಾರತದಿಂದ ಇಂಡೋನೇಷ್ಯಾಕ್ಕೆ ತೆರಳಿದರು. ಒಬಾಮ ದಂಪತಿಗಳಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವ ಸಲ್ಮಾನ್ ಖುರ್ಷಿದ್, ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರಿ ಟಿಮೋತಿ ಕೂಡ ಹಾಜರಿದ್ದರು.