ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಕ್ಕಳ ಕಿಡ್ನ್ಯಾಪ್, ಕೊಲೆ: ಆರೋಪಿ ಚಾಲಕನ ಎನ್‌ಕೌಂಟರ್ (Child Abductor Shot dead)
Bookmark and Share Feedback Print
 
ಶಾಲಾ ವಾಹನ ಚಾಲಕನ ಸೋಗಿನಲ್ಲಿ ಬಂದು, ಮಕ್ಕಳನ್ನು ಅಪಹರಿಸಿ, ಅತ್ಯಾಚಾರ, ಕೊಲೆ ನಡೆಸಿದ ಆರೋಪಿಯನ್ನು ಮಂಗಳವಾರ ಕೊಯಮತ್ತೂರಿನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಮೋಹನ್ ಕೃಷ್ಣನ್ ಎಂಬ 23ರ ಆರೋಪಿ ಶಾಲಾ ವಾಹನ ಚಾಲಕ, ಕೊಯಮತ್ತೂರಿನಲ್ಲಿ ಕಳೆದ ವಾರ 10 ವರ್ಷದ ಬಾಲಕಿ ಮತ್ತು 7ರ ಹರೆಯದ ಆಕೆಯ ತಮ್ಮನನ್ನು ಅಪಹರಿಸಿ, ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಇಬ್ಬರನ್ನೂ ಕಾಲುವೆಯೊಂದಕ್ಕೆ ತಳ್ಳಿ ಕೊಂದು ಹಾಕಿದ್ದು, ಇದು ಇಡೀ ತಮಿಳುನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಮತ್ತು ಶಾಲೆಗೆ ಕರೆದೊಯ್ಯುವ ವಾಹನಗಳ ಮೇಲೆ ಕಟ್ಟೆಚ್ಚರ ವಹಿಸುವ ಬಗ್ಗೆ ಸರಕಾರವೇ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿತ್ತು.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೋಹನ್‌ನನ್ನು ಮಂಗಳವಾರ ಹತ್ಯೆ ಮಾಡಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಆರೋಪಿಯೇ ಸ್ವತಃ ತನಗೆ ದಯಾಮರಣ ನೀಡುವಂತೆ ಕೋರಿದ್ದ ಎಂದು ಮೂಲಗಳು ಹೇಳಿವೆ.

ಬಂಧಿತನಾಗಿದ್ದ ಆರೋಪಿಯನ್ನು, ಮಕ್ಕಳನ್ನು ಕೊಂದು ಬಿಸಾಡಿದ ಸ್ಥಳಕ್ಕೆ ತನಿಖೆಗಾಗಿ ಕರೆದೊಯ್ಯಲಾಗುತ್ತಿತ್ತು. ನಸುಕಿನ ಜಾವ ಸುಮಾರು 5.30ರ ವೇಳೆಗೆ ಈ ಘಟನೆ ಸಂಭವಿಸಿದೆ. ಮೋಹನ್ ಪೊಲೀಸರ ಕೈಯಲ್ಲಿದ್ದ ರಿವಾಲ್ವರ್ ಕಸಿದುಕೊಳ್ಳಲು ಪ್ರಯತ್ನಿಸಿ, ಪೊಲೀಸರ ಮೇಲೆ ದಾಳಿಗೆ ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಕೊಯಮತ್ತೂರು ಪೊಲೀಸ್ ಆಯುಕ್ತ ಶೈಲೇಂದ್ರ ಬಾಬು ಹೇಳಿದ್ದಾರೆ. ಆರೋಪಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೋಹನ್ ಕೃಷ್ಣನ್ ಗುಂಡು ಹಾರಿಸಿದಾಗ ಗಾಯಗೊಂಡಿದ್ದ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವೆಂಬರ್ 4ರಂದು, ಅತ್ಯಾಚಾರ ಪ್ರಕರಣಗಳಲ್ಲಿ ಕಡ್ಡಾಯವಾಗಿರುವ ಸಂತಾನಶಕ್ತಿ ಪರೀಕ್ಷೆಗೆ ಆತನನ್ನು ಕರೆದೊಯ್ಯುತ್ತಿದ್ದಾಗ, ದಯವಿಟ್ಟು ತನ್ನನ್ನು ಕೊಂದುಬಿಡಿ ಎಂದು ಆರೋಪಿಯೇ ಕೇಳಿಕೊಂಡಿದ್ದ. ಅವನ ಮೇಲೆ ಜನರ ಆಕ್ರೋಶ ಎಷ್ಟು ತೀವ್ರವಾಗಿತ್ತೆಂದರೆ, ಆಸ್ಪತ್ರೆಗೆ ಆತನನ್ನು ಒಯ್ಯುತ್ತಿದ್ದಾಗ ಅವನ ಮೇಲೆ ಕಲ್ಲು, ಕೊಳೆತ ಮೊಟ್ಟೆ ಮತ್ತು ಚಪ್ಪಲಿಯನ್ನು ತೂರಿದ್ದರು.

ಅಕ್ಟೋಬರ್ 29ರಂದು ಮೋಹನ್ ಕೃಷ್ಣನ್ ಇಬ್ಬರು ಮಕ್ಕಳನ್ನು ಹಣದಾಸೆಗಾಗಿ ಅಪಹರಿಸಿದ್ದ. ಮಕ್ಕಳು ತಮ್ಮ ಶಾಲೆಯೆದುರು ತಮ್ಮ ವ್ಯಾನ್‌ಗಾಗಿ ಕಾಯುತ್ತಿದ್ದರು. ಆಗ ಬೇರೊಂದು ವಾಹನದಲ್ಲಿ ಬಂದ ಆತ, ಆದಿನ ನಿಗದಿತ ಚಾಲಕನು ರಜೆಯಲ್ಲಿರುವುದರಿಂದ ತಾನು ಬಂದಿರುವುದಾಗಿ ಹೇಳಿ ನಂಬಿಸಿದ್ದ. ಮಕ್ಕಳು ಏನೂ ಗೊತ್ತಿಲ್ಲದೆ ಆ ವಾಹನವನ್ನು ಏರಿದ್ದರು. ಆತ ಈ ಹಿಂದೆಯೂ ಇದೇ ರೀತಿ ಬದಲಿ ಚಾಲಕನಾಗಿ ಬಂದಿದ್ದರಿಂದ ಮಕ್ಕಳಿಗೂ ಗೊತ್ತಾಗಲಿಲ್ಲ.

ಸ್ವಲ್ಪ ಹೊತ್ತಿನ ಬಳಿಕ ಬಂದ ನೇಮಿತ ಚಾಲಕ ರೆಂಜಿತ್ ಕುಮಾರ್, ಮಕ್ಕಳನ್ನು ಕಾಣದಿದ್ದಾಗ ಪೋಷಕರಿಗೆ ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದ. ಈ ಮಕ್ಕಳ ದೇಹಗಳು ಕೊಯಮತ್ತೂರಿನಿಂದ 77 ಕಿ.ಮೀ. ದೂರದಲ್ಲಿದ್ದ ತ್ರಿಮೂರ್ತಿ ಜಲಾಶಯದಲ್ಲಿ ಸಿಕ್ಕಿತ್ತು. ಬಳಿಕ ಪೊಲೀಸರು ಆತನ ಜಾಡುಹಿಡಿದು ಬಂಧಿಸಿದ್ದರು.

ಇದಾದ ಬಳಿಕವೂ ಚೆನ್ನೈಯಲ್ಲಿ ನವೆಂಬರ್ 1ರಂದು ಬಾಲಕನೊಬ್ಬನನ್ನು ಅಪಹರಿಸಲಾಗಿತ್ತು. ಒಂದು ಕೋಟಿ ಒತ್ತೆ ಹಣ ನೀಡಿ ಬಾಲಕನ ಬಿಡುಗಡೆಯಾದ ಬಳಿಕ ಪೊಲೀಸರು ಎಂಬಿಎ ಪದವೀಧರರಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಒತ್ತೆ ಹಣವನ್ನೂ ವಶಪಡಿಸಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ