1962ರಲ್ಲಿ ಈಗಾಗಲೇ ಆಕ್ರಮಣ ಮಾಡಿ ತೋರಿಸಿರುವ ಚೀನಾ, "ಶೀಘ್ರದಲ್ಲೇ" ಭಾರತದ ಮೇಲೆ ದಾಳಿ ನಡೆಸಲಿದೆ ಎಂದು ಮಾಜಿ ರಕ್ಷಣಾ ಸಚಿವ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಭವಿಷ್ಯ ನುಡಿದಿದ್ದಾರೆ.
"ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಹಾಗೂ ಲಡಾಖ್ ಸೇರಿದಂತೆ ಹಲವಾರು ರಾಜ್ಯಗಳ ಮೇಲೆ ಚೀನಾ ತನ್ನ ಹಕ್ಕು ಸಾಧಿಸತೊಡಗಿದೆ. ಅದು ಶೀಘ್ರದಲ್ಲೇ ನಮ್ಮ ಮೇಲೆ ದಾಳಿ ಮಾಡಲಿದೆ. ಯಾವುದೇ ಕ್ಷಣ ದಾಳಿ ನಡೆಯಬಹುದು" ಎಂದು ಲೋಕಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಮಾತನಾಡುತ್ತಿದ್ದ ಮುಲಾಯಂ ಹೇಳಿದರು.
ಮುಲಾಯಂ ಹೇಳಿಕೆಗೆ ಜೆಡಿಯು ಮುಖ್ಯಸ್ಥ ಶರದ್ ಯಾದವ್ ದನಿಗೂಡಿಸಿದರೆ, ಚೀನಾವು ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವುದರಿಂದ ಅದು ದೊಡ್ಡ ಬೆದರಿಕೆಯಾಗಿದೆ ಎಂದು ಎಸ್‌ಪಿ ಸದಸ್ಯ ರಾಮಕೃಷ್ಣ ಹೇಳಿದರು.
ಈ ಬೆದರಿಕೆಯ ಹಿನ್ನೆಲೆಯಲ್ಲಿ, ತಕ್ಷಣವೇ ಈ ಕುರಿತು ಲೋಕಸಭೆಯಲ್ಲಿ ಚರ್ಚೆಯಾಗಬೇಕು ಎಂದು ಮುಲಾಯಂ ಆಗ್ರಹಿಸಿದರು. ಇದನ್ನು ರಕ್ಷಣಾ ಸಚಿವರ ಗಮನಕ್ಕೆ ತರುವುದಾಗಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದಾಗ, ನಾವು ಈ ಬಗ್ಗೆ ಚರ್ಚಿಸೋಣ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಹೇಳಿದರು.
ಚೀನಾದ ಬೆದರಿಕೆ ಬಗ್ಗೆ ಸೇನೆಯ ಉನ್ನತಾಧಿಕಾರಿಗಳು ಸರಕಾರವನ್ನು ಎಚ್ಚರಿಸುತ್ತಲೇ ಇದ್ದಾರೆ ಎಂದು ಮುಲಾಯಂ ಗಮನ ಸೆಳೆದರು.
ಗಡಿಯಾಚೆಗೆ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಿರುವ ಚೀನಾದ ಉದ್ದೇಶವೇನೆಂಬುದು ಭಾರತಕ್ಕೆ ಖಚಿತವಾಗಿ ತಿಳಿದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಹೇಳಿಕೆಯ ಹಿನ್ನೆಲೆಯಲ್ಲಿ ಮುಲಾಯಂ ವಾದವು ಮಹತ್ವ ಪಡೆದುಕೊಂಡಿದೆ.