ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸತ್ ಅಧಿವೇಶನ; ಹಗರಣಗಳ ಪ್ರತಿಧ್ವನಿ-ಚರ್ಚೆಗೆ ಸಿದ್ದ; ಪಿಎಂ (Parliament session | Lok Sabha | corruption charges | Commonwealth)
Bookmark and Share Feedback Print
 
ಸಂಸತ್ ಚಳಿಗಾಲ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿ, ಕಾಮನ್‌ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರ, ಮುಂಬೈ ಆದರ್ಶ ಸೊಸೈಟಿ ಹಗರಣ, 2ಜಿ ಸ್ಪ್ರೆಕ್ಟ್ರಮ್ ಹಗರಣ ಲೋಕಸಭೆಯಲ್ಲಿ ಪ್ರತಿಧ್ವನಿಸಿ ಸರಕಾರ ಪೇಚಿಗೆ ಸಿಲುಕುವಂತಾಯಿತು.

ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇಂಡೋನೇಷ್ಯಾಕ್ಕೆ ಮಂಗಳವಾರ ಪ್ರಯಾಣ ಬೆಳೆಸುತ್ತಿದ್ದಂತೆ ಆರಂಭವಾದ ಅಧಿವೇಶನದ ಮೊದಲ ದಿನವೇ ಹಗರಣಗಳ ವಿಷಯವನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡವು.

ಪ್ರತಿಪಕ್ಷಗಳ ಬಾಯಿಮುಚ್ಚಿಸುವ ನಿಟ್ಟಿನಲ್ಲಿಯೇ ಅಧಿವೇಶನ ಆರಂಭವಾಗುವ ಮುನ್ನವೇ ಆದರ್ಶ ಸೊಸೈಟಿ ಹಗರಣಕ್ಕೆ ಸಿಲುಕಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದ ಉಸ್ತುವಾರಿ ಹೊತ್ತಿದ್ದ ಸುರೇಶ್ ಕಲ್ಮಾಡಿ ಅವರ ತಲೆದಂಡ ತೆಗೆದುಕೊಂಡಿದೆ.

ಆದರೂ ಪ್ರತಿಪಕ್ಷಗಳು ಈ ಹಗರಣಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಲೋಕಸಭಾಧ್ಯಕ್ಷರಲ್ಲಿ ವಿಪಕ್ಷಗಳು ಮನವಿ ಮಾಡಿ ಕೋಲಾಹಲ ಎಬ್ಬಿಸಿದವು. ಅದೇ ರೀತಿ ಹಗರಣಕ್ಕೆ ಕಾರಣರಾದ ಸುರೇಶ್ ಕಲ್ಮಾಡಿ ಹಾಗೂ ಅಶೋಕ್ ಚವಾಣ್ ಅವರ ರಾಜೀನಾಮೆ ಪಡೆದಿರುವಂತೆ 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ರಾಜಾ ಅವರ ರಾಜೀನಾಮೆ ಪಡೆಯುವಂತೆ ಬಿಜೆಪಿ ಆಗ್ರಹಿಸಿದೆ.

ಲೋಕಸಭಾ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷೆ ಮೀರಾ ಕುಮಾರ್ ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲು ಎದ್ದು ನಿಂತಾಗ, ಸಿಪಿಐಎಂ ನಾಯಕ ಬಸುದೇವ್ ಆಚಾರ್ಯ ಅವರು ಮುಂಬೈನಲ್ಲಿ ನಡೆದಿರುವ ಆದರ್ಶ ಸೊಸೈಟಿಯ ಬಹುಮಹಡಿ ವಸತಿ ಸಮುಚ್ಛಯ ನಿರ್ಮಾಣದ ಹಗರಣದ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆ ಕೊಟ್ಟಿರುವುದಾಗಿ ಹೇಳಿ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.

ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಹಾಗೂ ಎಡಪಕ್ಷಗಳು ಆದರ್ಶ ಸೊಸೈಟಿ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಒಂದೆಡೆ ಆಗ್ರಹಿಸಿದರೆ, ಮತ್ತೊಂದೆಡೆ ಚೀನಾಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ನೀಡಿರುವ ಹೇಳಿಕೆ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸಮಾಜವಾದಿ ಪಕ್ಷ ಆಗ್ರಹಿಸಿತು.

ಯುಪಿಎ ಹಗರಣಗಳ ಸರಕಾರ ಎಂದು ಟೀಕಿಸಿದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು, ಸಿಬಿಐಯನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಎಲ್ಲಾ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ದ-ಪ್ರಧಾನಿ: ಸಂಸತ್ ಚಳಿಗಾಲದ ಅಧಿವೇಶನ ಶಾಂತಿಯುತವಾಗಿ, ಸುಸೂತ್ರವಾಗಿ ನಡೆಯುವ ಭರವಸೆ ವ್ಯಕ್ತಪಡಿಸಿರುವ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಎಲ್ಲಾ ವಿಚಾರಗಳ ಬಗ್ಗೆ ಪ್ರತಿಪಕ್ಷಗಳೊಂದಿಗೆ ಚರ್ಚಿಸಲು ಸರಕಾರ ಸಿದ್ದವಿದೆ ಎಂದು ಸಂಸತ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ