ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಗ್ಳೂರಿನಿಂದ ಕೆಲಸ ಬಿಟ್ಟವಳಿಗೆ ಮರ್ಯಾದಾ ಹತ್ಯೆ ಭೀತಿ
(Honour Killing | Delhi High Court | Sheela Meena | Parents)
ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಮದುವೆ ಮಾಡಿದ್ದರಿಂದ ಮಾವನ ಮನೆಗೆ ಮರಳಿ ಹೋಗಲು ನಿರಾಕರಿಸಿದ ಯುವತಿಯೊಬ್ಬಳು ಮರ್ಯಾದಾ ಹತ್ಯೆಯ ಭೀತಿಯಿಂದ ಹೈಕೋರ್ಟ್ ಮೊರೆ ಹೋಗಿದ್ದು, ಆಕೆಯ ಹೆತ್ತವರಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ. ಈ ಯುವತಿಯು ಬೆಂಗಳೂರಿನಲ್ಲಿಯೂ ನೌಕರಿಯಲ್ಲಿದ್ದಳು.
ಈ ಕುರಿತು ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅಜಿತ್ ಭರಿಹೋಕೆ ಅವರಿಂದ ನಿರ್ದೇಶನ ಪಡೆದವರು ರಾಜಸ್ಥಾನದ ಜೈಪುರ ನಿವಾಸಿಗಳಾದ ರಘುವರ ಪ್ರಸಾದ್ ಮೀನಾ ಮತ್ತು ಪತ್ನಿ ಜಗಮಂತಿ. ಆದರೆ ಅವರು ಹಾಜರಾಗಬೇಕಿರುವುದು ಮುಂದಿನ ವರ್ಷದ ಮಾರ್ಚ್ 13ರಂದು.
ಅವರ ಮಗಳು, 22ರ ಹರೆಯದ ಶೀಲಾ ಮೀನಾ ಎಂಬಾಕೆ, ತಾನು ಮಾವನ ಮನೆಯಿಂದ ಓಡಿಬಂದಿರುವುದರಿಂದ ತನಗೆ ಮರ್ಯಾದಾ ಹತ್ಯೆಯ ಭೀತಿಯಿದೆ, ರಕ್ಷಣೆ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು.
ದೆಹಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸೋದರ ಮಾವ ಮನ್‌ರಾಜ್ ಮೀನಾ ಸಹಾಯದಿಂದ ಹೆತ್ತವರು ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಇದರ ಪರಿಣಾಮದಿಂದಾಗಿಯೇ ತಾನು ಬೆಂಗಳೂರು ಮತ್ತು ನೋಯಿಡಾಗಳಲ್ಲಿ ಉದ್ಯೋಗವನ್ನೂ ತೊರೆಯಬೇಕಾಗಿಬಂತು ಎಂದು ಅರ್ಜಿಯಲ್ಲಿ ಶೀಲಾ ಹೇಳಿದ್ದಳು.
ಮಾವನ ಮನೆಗೆ ಹೋಗಲು ನಿರಾಕರಿಸಿರುವುದರಿಂದ ತಮ್ಮ ಮನೆತನದ ಮರ್ಯಾದೆ ಕಾಪಾಡಲು ಹೆತ್ತವರು ಮತ್ತು ಸೋದರ ಮಾವ ತನ್ನನ್ನು ಜೈಪುರಕ್ಕೆ ಬಲವಂತವಾಗಿ ಕರೆದೊಯ್ಯುತ್ತಾರೆ ಇಲ್ಲವೇ ನಾನು ಜೈಪುರದಲ್ಲಿ ಅಥವಾ ಅಲ್ಲಿಗೆ ಹೋಗುವ ಹಾದಿಯಲ್ಲಿ ಕೊಂದುಬಿಡುತ್ತಾರೆ ಎಂದು ಆಕೆ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದ ಜೂನ್ ತಿಂಗಳಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ತನ್ನನ್ನು ಅನಾರೋಗ್ಯದ ನೆಪದಿಂದ ಕರೆಸಿಕೊಂಡು, ಜೈಪುರದಲ್ಲಿ ಗಜರಾಜ ಮೀನಾ ಎಂಬಾತನಿಗೆ ಬಲವಂತವಾಗಿ ಮದುವೆ ಮಾಡಿಸಿದರು. ಮದುವೆ ಇಷ್ಟವಿಲ್ಲದ್ದರಿಂದ ಆತನೊಂದಿಗೆ ಮುಂದುವರಿಯಲು ನಿರಾಕರಿಸಿದ್ದರಿಂದ ಗಜರಾಜನೂ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದ. ಹೀಗಾಗಿ ಅಲ್ಲಿಂದ ಓಡಿ ಬಂದು, ಪುನಃ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಅಲ್ಲಿಗೆ ಮತ್ತೆ ಬಂದ ಹೆತ್ತವರು ಸಮಸ್ಯೆ ಸೃಷ್ಟಿ ಮಾಡಿ, ಕೆಲಸ ಬಿಡುವಂತೆ ಮಾಡಿದರು ಎಂದು ಅರ್ಜಿಯಲ್ಲಿ ದೂರಲಾಗಿದೆ.
ಆ ಬಳಿಕ ನೋಯಿಡಾದಲ್ಲಿ ಬ್ಯಾಂಕ್ ಒಂದರಲ್ಲಿ ಉದ್ಯೋಗ ಮಾಡತೊಡಗಿದಾಗ, ಅಲ್ಲೂ ಹೆತ್ತವರು, ಮಾವ ಬಂದು ಗಲಾಟೆ ಮಾಡಿ ಕೆಲಸದಿಂದ ಬಿಡಿಸಿಬಿಟ್ಟರು. ಹೀಗಾಗಿ ಆಕೆ ಕಳೆದ ಡಿಸೆಂಬರ್ ತಿಂಗಳಲ್ಲಿ ದೆಹಲಿ ಪೊಲೀಸರಿಗೆ ತನ್ನ ರಕ್ಷಣೆಗಾಗಿ ದೂರು ನೀಡಿದ್ದಳು. ಆ ಬಳಿಕ ಆಕೆಗೆ ರಕ್ಷಣೆ ನೀಡುವಂತೆ ದೆಹಲಿ ಹೈಕೋರ್ಟು ಪೊಲೀಸರಿಗೆ ಏಪ್ರಿಲ್ ತಿಂಗಳಲ್ಲಿ ಸೂಚನೆ ನೀಡಿತ್ತು. ಇದೀಗ, ಮರ್ಯಾದಾ ಹತ್ಯೆಯ ಭೀತಿಯಲ್ಲಿ ಆಕೆ ಪುನಃ ಹೈಕೋರ್ಟ್ ಮೆಟ್ಟಿಲೇರಿದ್ದಳು.