ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣದಲ್ಲಿ ಖಜಾನೆಗೆ 1.70 ಲಕ್ಷ ಕೋಟಿ ನಷ್ಟ: ಸಿಎಜಿ (2G Spectrum | Telecom Minister | UPA Corruption | Raja | DMK | Congress)
Bookmark and Share Feedback Print
 
PTI
ಹಗರಣಗಳಿಂದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್, ಕಾಮನ್ವೆಲ್ತ್ ಗೇಮ್ಸ್ ಆಯೋಜಕ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರ ತಲೆದಂಡವಾಗಿರುವಂತೆಯೇ, ಪ್ರತಿಪಕ್ಷಗಳು, ಸುಪ್ರೀಂ ಕೋರ್ಟ್ ಮತ್ತು ಜನ ಸಾಮಾನ್ಯರ ತೀವ್ರ ಆಕ್ರೋಶಕ್ಕೆ ತುತ್ತಾಗಿರುವ ಟೆಲಿಕಾಂ ಸಚಿವ ಎ.ರಾಜಾ ಅವರ ಕೊರಳಿನ ಸುತ್ತ ಉರುಳು ಬಿಗಿಯಾಗುತ್ತಿದ್ದು, ಅವರಿಂದಾಗಿ ದೇಶದ ಖಜಾನೆಗೆ 1.70 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಸಾರ್ವಜನಿಕ ಲೆಕ್ಕಪತ್ರ ಇಲಾಖೆಯ ಈ ವರದಿಯು ಈಗಾಗಲೇ ರಾಜಕೀಯ ಕೋಲಾಹಲದ ಬೆಂಕಿಗೆ ತುಪ್ಪ ಸುರಿದಿದ್ದು, ಸಂಸತ್ತಿನಲ್ಲಿ ಬುಧವಾರ ತಮಿಳುನಾಡಿನ ಕರುಣಾನಿಧಿ ಅವರ ಪಕ್ಷದ ಡಿಎಂಕೆ ನಾಯಕನಾಗಿರುವ ರಾಜಾ ವಿರುದ್ಧ, ಜಯಲಲಿತಾ ಅವರ ಎಐಎಡಿಎಂಕೆ ಪಕ್ಷದ ಸದಸ್ಯರು ತೀವ್ರ ಕೋಲಾಹಲವೆಬ್ಬಿಸಿ, ಸದನ ಮುಂದೂಡಿಕೆಗೂ ಕಾರಣರಾಗಿದ್ದಾರೆ.

ಟೆಲಿಕಾಂ ಇಲಾಖೆಯ 2ಜಿ ಸ್ಪೆಕ್ಟ್ರಂ ಅನ್ನು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದಕ್ಕೆ ರಾಜಾ ಅವರೇ ಕಾರಣರಾಗಿದ್ದು, ಇದರಿಂದ ದೇಶದ ಖಜಾನೆಗೆ 1,70,000 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.

2ಜಿ ಸ್ಪೆಕ್ಟ್ರಂ ವಿತರಣೆ ಹಗರಣದ ಕುರಿತಾದ ತನ್ನ ಅಂತಿಮ ವರದಿಯಲ್ಲಿ ಸಿಎಜಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆ ಸಚಿವರು ಪ್ರಧಾನ ಮಂತ್ರಿ, ಕಾನೂನು ಮಂತ್ರಿ ಮತ್ತು ವಿತ್ತ ಸಚಿವರ ಸಲಹೆಗಳನ್ನೂ ಧಿಕ್ಕರಿಸಿ ಮತ್ತು ಟೆಲಿಕಾಂ ಆಯೋಗದ ಶಿಫಾರಸುಗಳನ್ನೂ ತಿರಸ್ಕರಿಸಿ, 2ಜಿ ಸ್ಪೆಕ್ಟ್ರಂ ಅನ್ನು ಅತ್ಯಂತ ಅಗ್ಗದ ದರದಲ್ಲಿ ಕೆಲವೇ ಕೆಲವು ಆಯ್ದ ಕಂಪನಿಗಳಿಗೆ ವಿತರಿಸಿದ್ದಾರೆ ಎಂದು ವರದಿ ಹೇಳಿದೆ.

ಈ ಹಗರಣದ ಬಗ್ಗೆ ಮೂಕಪ್ರೇಕ್ಷಕನಂತಿರುವ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಅನ್ನೂ ತರಾಟೆಗೆ ತೆಗೆದುಕೊಂಡಿದೆ ಸಿಎಜಿ. ಈ ವರದಿಯನ್ನು ಸೋಮವಾರವೇ ಪ್ರಧಾನಮಂತ್ರಿ ಕಚೇರಿಗೆ ಸಲ್ಲಿಸಲಾಗಿದೆ.

2008ರ ಜನವರಿ ತಿಂಗಳಲ್ಲಿ ಕೈಗೊಂಡಿದ್ದ ವಿವಾದಾತ್ಮಕ ನಿರ್ಧಾರದಲ್ಲಿ 122 ಹೊಸ ಪರವಾನಗಿಗಳಲ್ಲಿ 12 ಕಂಪನಿಗಳಿಗೆ ನೀಡಿರುವ 85 ಪರವಾನಗಿಗಳು, ಟೆಲಿಕಾಂ ಇಲಾಖೆಯ ಅರ್ಹತಾ ಮಾನದಂಡಗಳನ್ನು ಪಾಲಿಸುತ್ತಿರಲಿಲ್ಲ ಎಂದು ಕಂಡುಕೊಂಡಿದೆ ಸಿಎಜಿ.

2008ರಲ್ಲಿ 2ಜಿ ಸ್ಪೆಕ್ಟ್ರಂ ಅನುಮತಿಯೊಂದಿಗೆ ಯುನಿಫೈಡ್ ಆಕ್ಸೆಸ್ ಸರ್ವಿಸ್ (ಯುಎಎಸ್) ಪರವಾನಗಿಗಳನ್ನು 2001ರ ದರದಲ್ಲಿ ನೀಡಲಾಗಿದೆ ಎಂದು ವರದಿ ಆರೋಪಿಸಿದೆ.

ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಕೂಡ, ರಾಜಾ ಅವರು ಸಂಪುಟದಲ್ಲಿ ಇನ್ನೂ ಮುಂದುವರಿಯುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿತ್ತು. ಈ ಹಗರಣವು ಸಾಕಷ್ಟು ಹಿಂದೆಯೇ ಬೆಳಕಿಗೆ ಬಂದಿದ್ದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, ಈ ತಮಿಳುನಾಡಿನ ನಾಯಕನನ್ನು ಇನ್ನೂ ಉಳಿಸಿಕೊಂಡಿರುವುದು ಜನರಲ್ಲಿ ಸಂಶಯವೇಳಲು ಕಾರಣವಾಗಿದೆ.

ಈ ವರದಿಯು ಪ್ರತಿಪಕ್ಷಗಳಿಗೆ ಕೇಂದ್ರದ ಮೇಲೆ ಮುಗಿಬೀಳಲು ಮತ್ತೊಂದು ಬಲವಾದ ಆಯುಧವನ್ನೇ ನೀಡಿದ್ದು, ಡಿಎಂಕೆ ಅಧ್ಯಕ್ಷ ಕರುಣಾನಿಧಿಯಾಗಲೀ, ಕಾಂಗ್ರೆಸ್/ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯಾಗಲೀ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಎಲ್ಲರ ಕುತೂಹಲ.
ಸಂಬಂಧಿತ ಮಾಹಿತಿ ಹುಡುಕಿ