ಹಿಂದೂ ಸಂಘಟನೆಗಳ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿರುವ ಆಡಳಿತಾರೂಢ ಕೇಂದ್ರದ ಯುಪಿಯ ಸರಕಾರದ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಬುಧವಾರ ದೇಶವ್ಯಾಪಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಹಿಂದೂ ವಿರೋಧಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದೆ.
2006ರಲ್ಲಿ ನಡೆದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ರಾಜಸ್ತಾನ ಭಯೋತ್ಪಾದನ ನಿಗ್ರಹ ದಳ ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ವಿರುದ್ಧ ಆರೋಪ ಹೊರಿಸಿ ತನಿಖೆ ನಡೆಸುತ್ತಿರುವ ಬಗ್ಗೆ ಆರ್ಎಸ್ಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಇಂದ್ರೇಶ್ ಕುಮಾರ್ ಪ್ರಮುಖ ಆರೋಪಿ ಎಂದು ರಾಜಸ್ತಾನದ ಎಟಿಎಸ್ ಅಧಿಕಾರಿಗಳು ಆರೋಪಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜೈಪುರದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ವರಿಷ್ಠ ಮೋಹನ್ ಭಾಗ್ವತ್, ಉಗ್ರರ ಜೊತೆ ಆರ್ಎಸ್ಎಸ್ ಹೋಲಿಕೆ ತಪ್ಪು ಎಂದು ಹೇಳಿದರು. ಹಿಂದೂ ಸಂಘಟನೆಗಳ ವಿರುದ್ಧ ವ್ಯವಸ್ಥಿತವಾಗಿ ಸಂಚು ನಡೆಸಿ ಭಯೋತ್ಪಾದನೆಗೆ ತಳುಕು ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಷಡ್ಯಂತ್ರದ ಮೇಲೆ ಆರ್ಎಸ್ಎಸ್ ವಿರುದ್ಧ ಗೂಬೆ ಕೂರಿಸಲಾಗುತ್ತಿದೆ. ಅಲ್ಲದೇ ಕಾಂಗ್ರೆಸ್ ಕೇಸರಿ ಭಯೋತ್ಪಾದನೆ ಎಂಬ ಹೆಸರನ್ನು ಬಳಸುತ್ತಿರುವುದಾಗಿ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಅಜ್ಮೀರ್ ಸ್ಫೋಟ ಪ್ರಕರಣದಲ್ಲಿಯೂ ಇಂದ್ರೇಶ್ ಕುಮಾರ್ ಅವರನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕುತಂತ್ರದ ಮೇಲೆ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.
ಆರ್ಎಸ್ಎಸ್ ಮೇಲೆ ಭಯೋತ್ಪಾದನೆ ಆರೋಪವನ್ನು ಹೊರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು, ಮಂಗಳೂರು, ಉಡುಪಿ, ಮಹಾರಾಷ್ಟ್ರ, ಜೈಪುರ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಯಿತು.