ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರುಚಿಕಾ ಆತ್ಮಹತ್ಯೆ: ಮಾಜಿ ಡಿಜಿಪಿ ರಾಥೋರ್‌ಗೆ ಜಾಮೀನು (SPS Rathore | Chandigarh | Ruchika molestation | Suicide | CBI)
Bookmark and Share Feedback Print
 
PTI
ರುಚಿಕಾ ಗಿರ್ಹೋತ್ರಾ ಲೈಂಗಿಕ ಪೀಡನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣದ ಮಾಜಿ ಡಿಜಿಪಿ ಎಸ್.ಪಿ.ಎಸ್.ರಾಥೋರ್‌ಗೆ ಸುಪ್ರೀಂ ಕೋರ್ಟು ಬುಧವಾರ ಜಾಮೀನು ನೀಡಿದೆ.

ಅವರು ಈಗಾಗಲೇ ತಮ್ಮ 6 ತಿಂಗಳ ಜೈಲು ಶಿಕ್ಷೆ ಪೂರೈಸಿದ್ದಾರೆ ಮತ್ತು ಸಿಬಿಐ ಕೂಡ ಈ ಕೇಸನ್ನು ಮುಚ್ಚಿಹಾಕುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟು ಜಾಮೀನು ನೀಡಿದೆ. ಆದರೆ, ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟರ ಅನುಮತಿಯಿಲ್ಲದೆ ಚಂಡೀಗಢ ಬಿಟ್ಟು ಹೋಗದಂತೆ ನ್ಯಾಯಾಲಯವು ರಾಥೋರ್‌ಗೆ ತಾಕೀತು ಮಾಡಿದೆ.

ರಾಥೋರ್ ವಿರುದ್ಧ 14 ವರ್ಷದ ಬಾಲಕಿಯ ಲೈಂಗಿಕ ಪೀಡನೆ ಮತ್ತು ಹಲವಾರು ಆರೋಪಗಳಿದ್ದರೂ, ಅವರಿಗೆ ಬಡ್ತಿ, ಸವಲತ್ತುಗಳು ಹೆಚ್ಚುತ್ತಲೇ ಹೋಗಿದ್ದವು. ಮಾಧ್ಯಮಗಳ ಒತ್ತಡ, ಸಮಾಜಸೇವಾ ಸಂಘಟನೆಗಳ ಪ್ರತಿಭಟನೆಯ ನಂತರ, ಸುಮಾರು 18 ವರ್ಷಗಳ ಬಳಿಕ ರಾಥೋರ್‌ಗೆ ಶಿಕ್ಷೆ ಘೋಷಣೆಯಾಗಿತ್ತು. ಶಿಕ್ಷೆಯ ವಿರುದ್ಧ ರಾಥೋರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟಿನ ಎದುರು ಇನ್ನೂ ಬರಬೇಕಿದೆ.

ರುಚಿಕಾ ಆತ್ಮಹತ್ಯೆ ದಿನ ರಾಥೋರ್ ಚಂಡೀಗಢದಲ್ಲೇ ಇರಲಿಲ್ಲವೆಂದ ಸಿಬಿ
ಈ ಮಧ್ಯೆ, ಸಿಬಿಐ ಕೂಡ ಈ ಕೇಸನ್ನು ಬಹುತೇಕ ಮುಚ್ಚಿಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 1993ರ ಡಿಸೆಂಬರ್ 28ರಂದು ರುಚಿಕಾ ಆತ್ಮಹತ್ಯೆ ಮಾಡಿಕೊಂಡ ದಿನ, ರಾಥೋರ್ ಚಂಡೀಗಢದಲ್ಲೇ ಇರಲಿಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳುವ ಮೂಲಕ, ರುಚಿಕಾ ಕುಟುಂಬಕ್ಕೆ ನ್ಯಾಯ ದೊರೆಯುವ ಆಶಾಗೋಪುರ ಕುಸಿದುಬಿದ್ದಿದೆ.

ಇಷ್ಟಲ್ಲದೆ, ರುಚಿಕಾ ಸಹೋದರ ಆಶುವಿಗೆ ಥಳಿಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪಗಳೂ ನಿರಾಧಾರ. ಯಾಕೆಂದರೆ ಅಂದು ಅಧಿಕೃತ ಕಾರ್ಯ ನಿಮಿತ್ತ ರಾಥೋರ್ ದೆಹಲಿಯಲ್ಲಿದ್ದರು ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.

WD
1990ರಲ್ಲಿ ರುಚಿಕಾಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ರಾಥೋರ್‌ಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದ್ದು, ಅವರು ಜೈಲಿನಲ್ಲಿದ್ದರು. ರುಚಿಕಾ ತಂದೆ ಎಸ್.ಸಿ.ಗಿರ್ಹೋತ್ರಾ ಮಾಡಿದ ಎಂಟು ಆರೋಪಗಳಿಗೆ ಸಿಬಿಐ ನಿರಾಕರಣೆಯ ಉತ್ತರ ನೀಡಿದೆ.

ಸಿಬಿಐ ಈ ಕೇಸು ಮುಚ್ಚಿ ಹಾಕಿರುವ ವರದಿ ಸಲ್ಲಿಸಿರುವುದರಿಂದ ತಮಗೆ ತೀವ್ರ ನಿರಾಶೆಯಾಗಿದ್ದು, ಸುಪ್ರೀಂ ಕೋರ್ಟಿನ ಮೊರೆ ಹೋಗುವುದಾಗಿ ರುಚಿಕಾ ಕುಟುಂಬಿಕರು ಹೇಳಿದ್ದಾರೆ.

1990ರಲ್ಲಿ ಚಂಡೀಗಢದ ಸೇಕ್ರೆಂಡ್ ಹಾರ್ಟ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ರುಚಿಕಾ, ಆಗಸ್ಟ್ 12ರಂದು ಗೆಳತಿ ಆರಾಧನಾ ಜೊತೆಗೆ ರಾಥೋರ್ ಅವರನ್ನು ಭೇಟಿ ಮಾಡಿದ್ದಾಗ, ಅವರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಕುರಿತು ದೂರು ನೀಡಲಾಗಿ, 1990ರ ಸೆ.3ರಂದು ಗೃಹ ಕಾರ್ಯದರ್ಶಿ ಸಲ್ಲಿಸಿದ ವರದಿಯಲ್ಲಿಯೂ ರಾಥೋರ್ ಮೇಲಿನ ಆರೋಪಗಳು ನಿಜವೆಂದು ಸಾಬೀತಾಗಿತ್ತು. ಆದರೆ ಎರಡು ವಾರಗಳಲ್ಲೇ 1990ರ ಸೆ.20ರಂದು ರುಚಿಕಾಳನ್ನು ಶಾಲೆಯಿಂದಲೇ ಹೊರಗೆ ಹಾಕಲಾಯಿತು.

ಸೆ.23ರಂದು ರುಚಿಕಾಳ ಕಿರಿಯ ಸಹೋದರ, 13 ವರ್ಷದವನಾಗಿದ್ದ ಆಶುವನ್ನು ಹೊತ್ತೊಯ್ದ ಪೊಲೀಸರು, ಆತನಿಗೆ ಚೆನ್ನಾಗಿ ಹೊಡೆದು ಬಡಿದರು. ಆಶುವನ್ನು ಕೈಕೋಳ ತೊಡಿಸಿದ್ದನ್ನು ನೋಡಲಾಗದೆ ರುಚಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಳು. 1993ರ ಡಿಸೆಂಬರ್ 28ರಂದು ರುಚಿಕಾ ಆತ್ಮಹತ್ಯೆ ಮಾಡಿಕೊಂಡ ದಿನವೂ ಆಶುವಿಗೆ ರಾಥೋರ್ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು.

ಇದೀಗ ರುಚಿಕಾ ಆತ್ಮಹತ್ಯೆ ದಿನ ರಾಥೋರ್ ದೆಹಲಿಯಲ್ಲಿದ್ದರು ಎಂದು ಸಿಬಿಐ ಹೇಳಿ, ಕೇಸನ್ನು ಮುಚ್ಚಿಹಾಕಿದೆ. ರುಚಿಕಾಳ ಪೋಸ್ಟ್ ಮಾರ್ಟಂ ವರದಿಯನ್ನೂ ರಾಥೋರ್ ತಿರುಚಿದ್ದಾರೆ ಎಂಬ ಆರೋಪವೂ ಆಧಾರ ರಹಿತ ಎಂದಿದೆ ಸಿಬಿಐ. ಆತ ಕಿರುಕುಳ ನೀಡುತ್ತಿದ್ದಾನೆ ಎಂದು ರುಚಿಕಾ ಆರೋಪಿಸಿದಂದಿನಿಂದ, ರಾಥೋರ್ ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವುದನ್ನು ಸಹಿಸಲಾಗದೆ, ಆಕೆ ಆತ್ಮಹತ್ಯೆ ಮಾಡಿಕೊಂಡಳು. ಆತ್ಮಹತ್ಯೆಗೆ ಆತನೇ ಪ್ರೇರೇಪಿಸಿದ ಎಂದು ರುಚಿಕಾ ಕುಟುಂಬ ಆರೋಪಿಸಿತ್ತು. ಅದನ್ನೂ ಸಿಬಿಐ ತನ್ನ ವರದಿಯಲ್ಲಿ ತಳ್ಳಿ ಹಾಕಿದೆ.
ಸಂಬಂಧಿತ ಮಾಹಿತಿ ಹುಡುಕಿ