ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಾ ಕೈಬಿಡಿ, ಸರ್ಕಾರ ಬೀಳದಂತೆ ನಾವಿದ್ದೇವೆ: ಯುಪಿಎಗೆ ಜಯಾ (Jayalalithaa | A Raja | Telecom | 2G Spectrum Scam | UPA | DMK | Congress)
Bookmark and Share Feedback Print
 
PTI
ಡಿಎಂಕೆಯು ಬೆಂಬಲ ಹಿಂತೆಗೆದುಕೊಂಡರೆ ಸರಕಾರ ಉರುಳುತ್ತದೆ ಎಂಬ ಭೀತಿಯಿಂದಲೇ ಕಾಂಗ್ರೆಸ್ ಪಕ್ಷವು 1.76 ಲಕ್ಷ ಕೋಟಿ ಹಗರಣದ ಆರೋಪಿ ಟೆಲಿಕಾಂ ಸಚಿವ ಎ.ರಾಜಾ ಅವರನ್ನು ಉಚ್ಚಾಟಿಸುತ್ತಿಲ್ಲ ಎಂದು ಹೇಳಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ, ಈ ಬಗ್ಗೆ ಭೀತಿ ಬೇಡ, ರಾಜಾರನ್ನು ಉಚ್ಚಾಟಿಸಿ, ಸರಕಾರ ಬೀಳದಂತೆ ನಾವು ಸಂಖ್ಯಾ ಬಲ ನೀಡುತ್ತೇವೆ, ನೀವು ಮುಂದುವರಿಯಿರಿ ಎಂದು ಬಹಿರಂಗವಾಗಿ ಕರೆ ಕೊಟ್ಟಿದ್ದಾರೆ.

ಇದರೊಂದಿಗೆ ಕೇಂದ್ರದಲ್ಲಿ ರಾಜಕೀಯ ಮರುಹೊಂದಾಣಿಕೆಯ ಸಾಧ್ಯತೆಗಳಿಗೆ ಜಯಲಲಿತಾ ಕಿಡಿ ಹಚ್ಚಿದ್ದಾರೆ. ಮಾತ್ರವಲ್ಲದೆ, ಜಯಾ ಹೇಳಿಕೆಯಿಂದ ಆತಂಕಕ್ಕೆ ಸಿಲುಕಿರುವ ಡಿಎಂಕೆ, ರಾಜಾ ಅವರನ್ನು ವಾಪಸ್ ಕರೆಸಿಕೊಳ್ಳುವ ಸಾಧ್ಯತೆಗಳೂ ಕೂಡ ಕಂಡುಬರುತ್ತಿದೆ.

ಡಿಎಂಕೆ ಈಗ 18 ಸಂಸತ್ ಸದಸ್ಯರನ್ನು ಹೊಂದಿದೆ. ಅದು ಬೆಂಬಲ ಹಿಂತೆಗೆದುಕೊಂಡರೆ ಯುಪಿಎ ಸಂಖ್ಯಾಬಲವು 256ಕ್ಕೆ ಕುಸಿದು ಸರಕಾರವು ಉರುಳುತ್ತದೆ. ಬಹುಮತಕ್ಕೆ ಬೇಕಾಗಿರುವ 18 ಸಂಖ್ಯೆಯನ್ನು ತನ್ನ 9 ಸಂಸದರು ಹಾಗೂ ಇತರ ಸಮಾನ ಮನಸ್ಕರನ್ನು ಒಟ್ಟುಗೂಡಿಸಿ ತಾನು ಕೊಡುವುದಾಗಿ ಭರವಸೆ ನೀಡಿದ್ದಾರೆ ಜಯಲಲಿತಾ.

ದೇಶವನ್ನು ಬ್ರಿಟಿಷರು ದೋಚಿದ್ದಕ್ಕಿಂತಲೂ ಹೆಚ್ಚು ಎ.ರಾಜಾ ಅವರು ದೋಚಿದ್ದಾರೆ ಎಂದು ಹೇಳಿಕೆ ನೀಡಿದ್ದ ಜಯಲಲಿತಾ ಅವರ ಪ್ರಯತ್ನಕ್ಕೆ 3 ಸಂಸದರನ್ನು ಹೊಂದಿರುವ ಜೆಡಿಎಸ್ ಕೂಡ ಬೆಂಬಲ ಘೋಷಿಸಿದೆ.

2ಜಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡುವರೆ ವರ್ಷಗಳಿಂದಲೂ ರಾಜಾ ಅವರನ್ನು ಕಿತ್ತುಹಾಕಬೇಕೆಂದು ನಾನು ಆಗ್ರಹಿಸುತ್ತಲೇ ಬಂದಿದ್ದೇನೆ. ಈಗಾಗಲೇ ಹಗರಣ ಆರೋಪದಿಂದಾಗಿ ಶಶಿ ತರೂರ್, ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮುಂತಾದವರನ್ನು ಕೈಬಿಟ್ಟಿರುವ ಕಾಂಗ್ರೆಸ್‌ಗೆ ರಾಜಾ ಮೇಲೆ ಕ್ರಮ ಕೈಗೊಳ್ಳಲು ಮನಸ್ಸಿದ್ದರೂ, ಸರಕಾರ ಉರುಳುವ ಭಯದಿಂದ ಹಾಗೆ ಮಾಡುತ್ತಿಲ್ಲ. ಮಧ್ಯಂತರ ಚುನಾವಣೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ಸರಕಾರಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಜಯಾ ಅವರು ಟೈಮ್ಸ್ ನೌ ಟಿವಿ ಚಾನೆಲ್‌ಗೆ ಬುಧವಾರ ನೀಡಿರುವ ಸಂದರ್ಶನದಲ್ಲಿ ಭರವಸೆ ನೀಡಿದರು.

ದೇಶದ ರಕ್ಷಣೆಗಾಗಿ ಹಳೆಯದನ್ನು ಮರೆತು ಭವಿಷ್ಯದ ಬಗ್ಗೆ ಯೋಚಿಸುವುದೇ ರಾಜಕೀಯ ಎಂದ ಜಯಲಲಿತಾ, ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ತನ್ನ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸದಿಂದ ನುಡಿದರು.

ಇಂತಹಾ ಅತಿದೊಡ್ಡ ಹಗರಣವೊಂದು ಸುಖಾಸುಮ್ಮನೇ ಮುಚ್ಚಿಹೋಗಲು ಬಿಡಬಾರದು. ರಾಜಾ ಅವರನ್ನು ಕಿತ್ತು ಹಾಕದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದರು.

ಈ ಹಿಂದೆ ಸೋನಿಯಾ ಗಾಂಧಿ ಪ್ರಧಾನಿಯಾಗುವುದನ್ನು ಬಲವಾಗಿ ವಿರೋಧಿಸಿ ಹೆಸರು ಮಾಡಿದ್ದ ಜಯಾ, ಅವರ ಈ ಆಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಒಪ್ಪುವರೇ ಎಂಬುದು ಕಾದುನೋಡಬೇಕಾಗಿದೆ.

ಬಿಜೆಪಿ ಸ್ವಾಗತ...
ಜಯಲಲಿತಾ ಈ ಆಹ್ವಾನವನ್ನು ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಕೂಡ ಸ್ವಾಗತಿಸಿದೆ.

ನಮ್ಮದೂ 3 ಇದೆ, ತಗೊಳ್ಳಿ ಎಂದ ಕುಮಾರಸ್ವಾಮಿ...
ಇದೇ ವೇಳೆ, ಜಯಲಲಿತಾ ಆಹ್ವಾನವನ್ನು ಬೆಂಬಲಿಸಿರುವ 3 ಸಂಸದರನ್ನು ಹೊಂದಿರುವ ಜಾತ್ಯತೀತ ಜನತಾ ದಳದ ಕಾರ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಭ್ರಷ್ಟಾಚಾರ ವಿರುದ್ಧ ಯಾರೆಲ್ಲಾ ಹೋರಾಡುತ್ತಾರೋ, ಅವರಿಗೆ ನಮ್ಮ ಬೆಂಬಲವಿದೆ. ಕಾಂಗ್ರೆಸ್ ಜಯಾ ಕೊಡುಗೆಯನ್ನು ಸ್ವೀಕರಿಸಿದರೆ ನಾವೂ ಆಕೆಯನ್ನು ಬೆಂಬಲಿಸುತ್ತೇವೆ. ಈ ಕುರಿತು ಜಯಾ ತಮ್ಮೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು.

ಪ್ರಧಾನಿ ಮರಳಿದ ಬಳಿಕವಷ್ಟೇ ಪ್ರತಿಕ್ರಿಯೆ ಎಂದ ಡಿಎಂಕೆ...
ಹಗರಣ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಂಕೆ, ಬದ್ಧ ರಾಜಕೀಯ ವಿರೋಧಿ ಜಯಲಲಿತಾ ಅವರು ಕಾಂಗ್ರೆಸ್‌ಗೆ ಕೊಟ್ಟ ಕೊಡುಗೆಯಿಂದ ಒಂದಿಷ್ಟು ವಿಚಲಿತವಾದಂತೆ ಕಂಡುಬಂದಿದೆ. ಈಗ ಜಿ20 ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳಿದ್ದು, ಅವರು ಮರಳಿದ ಬಳಿಕ ಪ್ರಧಾನಮಂತ್ರಿಯೊಂದಿಗೆ ಪಕ್ಷಾಧ್ಯಕ್ಷ ಎಂ.ಕರುಣಾನಿಧಿ ಮಾತುಕತೆ ನಡೆಸಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ