ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂದಿರಾ, ರಾಜೀವ್ ಸಾವಿಗೆ ಸೋನಿಯಾ ಕಾರಣ: ಸುದರ್ಶನ್ (Indira Gandhi | Sonia Gandhi | CIA | RSS | Sudarshan | Congress)
Bookmark and Share Feedback Print
 
PTI
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರನ್ನು ಕಾಂಗ್ರೆಸ್‌ನ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಕೊಲ್ಲಿಸಿದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಆರೋಪಿಸಿದ್ದಾರೆ. ಇಷ್ಟು ಮಾತ್ರಕ್ಕೇ ನಿಲ್ಲಿಸದ ಸುದರ್ಶನ್, ಸೋನಿಯಾ ಸಿಐಎ (ಅಮೆರಿಕದ ಬೇಹುಗಾರಿಕಾ ಏಜೆನ್ಸಿ) ಏಜೆಂಟ್ ಮತ್ತು 'ಅಕ್ರಮ ಸಂತಾನ' ಎಂದೂ ಕರೆದಿದ್ದಾರೆ.

ಬುಧವಾರ ಭೋಪಾಲದಲ್ಲಿ ಕೇಂದ್ರ ಸರಕಾರದ ವಿರುದ್ಧ ಏರ್ಪಡಿಸಲಾಗಿದ್ದ ಪ್ರತಿಭಟನಾ ಧರಣಿಯ ಬಳಿಕ ಸುದ್ದಿಗಾರರೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಸುದರ್ಶನ್ ಈ ಆರೋಪ ಮಾಡಿದ್ದು, ದೈನಿಕ ಭಾಸ್ಕರದಲ್ಲಿ ಪ್ರಕಟವಾದ ಈ ಸುದ್ದಿ ಗುರುವಾರ ಬೆಳಿಗ್ಗೆ ಸಂಸತ್ತಿನಲ್ಲಿಯೂ ಕೋಲಾಹಲಕ್ಕೆ ಕಾರಣವಾಯಿತು.

ಸೋನಿಯಾ ಹುಟ್ಟಿದಾಗ ಅವರ ತಂದೆ ಜೈಲಿನಲ್ಲಿದ್ದರು. ಇದನ್ನು ಮುಚ್ಚಿಡುವುದಕ್ಕಾಗಿಯೇ ಅವರು ತಮ್ಮ ಜನನ ವರ್ಷವನ್ನು 1944ರ ಬದಲಾಗಿ 1946 ಎಂದು ಬದಲಾಯಿಸಿ ಹೇಳುತ್ತಿದ್ದಾರೆ. ಒಬ್ಬ ಕಾಂಗ್ರೆಸ್ ನಾಯಕರೇ ತಮಗೆ ಈ ಎಲ್ಲಾ ವಿಷಯವನ್ನು ತಿಳಿಸಿದರು ಎಂದು ಹೇಳಿರುವ ಸುದರ್ಶನ್, ಆ ನಾಯಕನ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು.

ಇದುವರೆಗೆ ಈ ಬಗ್ಗೆ ಸುಮ್ಮನಿದ್ದಿರೇಕೆ ಎಂದು ಸುದರ್ಶನ್ ಅವರಲ್ಲಿ ಪತ್ರಕರ್ತರು ಕೇಳಿದಾಗ, ಸುದರ್ಶನ್ ಮೌನವಾದರು. ಬಳಿಯಲ್ಲೇ ಇದ್ದ ಬಿಜೆಪಿ ನಾಯಕರೊಬ್ಬರು, ಇದು 'ಸೋನಿಯಾ ಗಾಂಧೀ ಕೀ ಸಚ್' ಎಂಬ ಪುಸ್ತಕದಲ್ಲಿದೆ ಎಂದು ಹೇಳಿದರು. ಈ ಪುಸ್ತಕವು ಬಿಜೆಪಿಯ ಮಾಜಿ ಸಂಸದ ದೀನಾನಾಥ್ ಮಿಶ್ರಾ ಅವರು ಬರೆದ 'ಸೋನಿಯಾ ಅಂಡರ್ ಸ್ಕ್ರೂಟಿನಿ' ಪುಸ್ತಕದ ಹಿಂದಿ ಭಾಷಾಂತರ. ಆದರೆ ಈ ಕುರಿತು ದೀನಾನಾಥ್ ಮಿಶ್ರಾ ಅವರನ್ನು ದೈನಿಕ್ ಭಾಸ್ಕರ್ ಪ್ರಶ್ನಿಸಿದಾಗ, ತನ್ನ ಪುಸ್ತಕದಲ್ಲಿ ಅಂಥದ್ದೇನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜೀವ್ ಗಾಂಧಿ ಅವರು ಕ್ರೈಸ್ತ ಧರ್ಮ ಸ್ವೀಕರಿಸಿ, ರಾಬರ್ಟ್ ಎಂದು ಹೆಸರು ಬದಲಾಯಿಸಿಕೊಂಡು ಸೋನಿಯಾರನ್ನು ಮದುವೆಯಾದರು. ನಂತರ ಇಂದಿರಾ ಗಾಂಧಿಯವರು ಮಗನಿಗೆ ವೈದಿಕ ಪದ್ಧತಿಯಲ್ಲಿ ಮದುವೆ ಮಾಡಿಸಿದರು ಎಂದು ಸುದರ್ಶನ್ ಆರೋಪಿಸಿದರು.

ಇಂದಿರಾ ಗಾಂಧಿಯ ಅಂಗರಕ್ಷಕರ ತಂಡದಿಂದ ಸತ್ವಂತ್ ಸಿಂಗ್ (ಇಂದಿರಾಗೆ ಗುಂಡಿಕ್ಕಿದಾತ)ನನ್ನು ತೆಗೆದುಹಾಕುವ ಪ್ರಸ್ತಾಪ ಬಂದಾಗ, ಇದು ನಡೆಯದಂತೆ ಸೋನಿಯಾ ತಡೆದಿದ್ದರು. ಇಂದಿರಾ ಅವರಿಗೆ ಗುಂಡೇಟು ಬಿದ್ದಾಗ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸುವ ಬದಲು, ತುಂಬಾ ದೂರದಲ್ಲಿದ್ದ ಎಐಐಎಂಎಸ್‌ಗೆ ಕರೆದೊಯ್ಯಲಾಯಿತು. ಅಷ್ಟು ಹೊತ್ತಿಗೆ ಸಾಕಷ್ಟು ರಕ್ತಸ್ರಾವವಾಗಿತ್ತು. ಎಐಐಎಂಎಸ್ ವೈದ್ಯರು "ಬ್ರಾಟ್ ಡೆಡ್" (ಅಂದರೆ, ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿದ್ದರು) ಎಂದು ಘೋಷಿಸಿದರು ಎಂದೂ ಸುದರ್ಶನ್ ಹೇಳಿದರು.

ರಾಜೀವ್ ಗಾಂಧಿಗೆ ಕೂಡ ಸೋನಿಯಾ ಮೇಲೆ ಸಂದೇಹ ಶುರುವಾಗಿತ್ತು. ರಾಜೀವ್ ಆಕೆಯಿಂದ ದೂರವಾಗಲು ಬಯಸಿದ್ದರು ಎಂದು ಹೇಳಿದ ಸುದರ್ಶನ್, ರಾಜೀವ್ ಹತ್ಯೆಯಲ್ಲಿ ಸೋನಿಯಾ ಮೇಲೆ ಷಡ್ಯಂತ್ರ ಆರೋಪ ಹೊರಿಸುತ್ತಾ, ಸೋನಿಯಾ ಸೂಚನೆಯ ಅನುಸಾರವೇ ಶ್ರೀಪೆರಂಬದೂರು ಸಭೆಯಲ್ಲಿ ರಾಜೀವ್ ಅವರಿಗೆ ಝಡ್-ಪ್ಲಸ್ ಭದ್ರತೆಯನ್ನು ಏರ್ಪಡಿಸಲಾಗಿರಲಿಲ್ಲ ಎಂದರಲ್ಲದೆ, ಈ ಬಗ್ಗೆ ತನಿಖೆ ನಡೆಯಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಆಕ್ರೋಶ: ಕ್ಷಮೆ ಯಾಚನೆಗೆ ಆಗ್ರಹ
ಸೋನಿಯಾ ವಿರುದ್ಧ ಮಾನಹಾನಿಕರ ಆರೋಪ ಮಾಡಿದ ಸುದರ್ಶನ್ ರಾಜೀನಾಮೆ ನೀಡಬೇಕು, ಇಲ್ಲವಾದರೆ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ಇದೇ ವಿಷಯದಲ್ಲಿ ಬೆಳಿಗ್ಗೆ ಸಂಸತ್ತಿನಲ್ಲಿ ತೀವ್ರ ಕೋಲಾಹಲವೂ ನಡೆಯಿತು. ಟೆಲಿಕಾಂ ಹಗರಣ ಆರೋಪಿ ಎ.ರಾಜಾ ಅವರನ್ನು ಕೈಬಿಡಲು ಪ್ರತಿಪಕ್ಷಗಳು ಗದ್ದಲವೆಬ್ಬಿಸಿದಾಗ, ಕಾಂಗ್ರೆಸ್ ಸುದರ್ಶನ್ ವಿಷಯವನ್ನೆತ್ತಿ, ತೀವ್ರ ಕೋಲಾಹಲ ನಡೆಸಿದವು. ತತ್ಪರಿಣಾಮವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡನ್ನೂ ಸೋಮವಾರದವರೆಗೆ ಮುಂದೂಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ