2008ರ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿ ನಮ್ಮ ರಾಜಾ ಏನೂ ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ.
ಈ ವಿಷಯದಲ್ಲಿ ಕಾಂಗ್ರೆಸ್ ಜೊತೆ ಮಾತನಾಡುವ ಅವಶ್ಯಕತೆಯೂ ಇಲ್ಲ ಎಂದ ಅವರು, ರಾಜಾ ಏನೂ ಕ್ರಿಮಿನಲ್ ಅಲ್ಲ. ಆತ ತಮ್ಮ ಹಿಂದಿನ ಎನ್‌ಡಿಎ ಸರಕಾರದ ಮಂತ್ರಿಗಳಾದ ಪ್ರಮೋದ್ ಮಹಾಜನ್ ಮತ್ತು ಅರುಣ್ ಶೌರಿ ಮಾಡಿದ್ದನ್ನೇ ಅನುಸರಿಸಿದ್ದಾರಷ್ಟೇ. ಅವರು ನಿಯಮವನ್ನು ಅನುಸರಿಸಿರುವಾಗ, ಉಲ್ಲಂಘಿಸಿದ್ದಾರೆ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದರು.
ರಾಜಾ ಅವರು ದೇಶದ ಖಜಾನೆಗೆ 1.76 ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಸಿಎಜಿ ವರದಿಯೇ ಹೇಳಿದೆಯಲ್ಲಾ ಎಂದು ಕೇಳಿದಾಗ, ವರದಿ ಬಗ್ಗೆ ನನಗೂ ಗೊತ್ತಿದೆ. ಸಿಎಜಿ ಯಾವಾಗಲೂ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳ ವಿರುದ್ಧ ವರದಿಗಳನ್ನು ಕೊಡುತ್ತಲೇ ಇದೆ ಎಂದು ಹೇಳಿಕೊಂಡರು.
ಡಿಎಂಕೆಯೇನಾದರೂ ಬೆಂಬಲ ಹಿಂತೆಗೆದರೆ ಯುಪಿಎಗೆ ಬೆಂಬಲಿಸುವುದಾಗಿ ಬದ್ಧ ರಾಜಕೀಯ ವಿರೋಧಿ, ಎಐಎಡಿಎಂಕೆಯು ಜಯಲಲಿತಾ ಕೊಡುಗೆ ನೀಡಿರುವ ಕುರಿತು ಪ್ರಸ್ತಾಪಿಸಿದಾಗ, "ಅವರಿಗೆ ಈಗಾಗಲೇ ಬಾಗಿಲಿನತ್ತ ಕೈ ತೋರಿಸಲಾಗಿದೆ. ನಮ್ಮಲ್ಲಿ ವೇಕೆನ್ಸಿ (ಕೆಲಸ ಖಾಲಿ) ಇಲ್ಲ ಎಂದು ಈಗಾಗಲೇ ಕಾಂಗ್ರೆಸ್ ಹೇಳಿಬಿಟ್ಟಿದೆ. ಅವರು ಬಾಗಿಲು ಮುಚ್ಚಿದ್ದಾರೆ" ಎಂದು ಹೇಳಿದರು.