ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಗ್ ಬಾಸ್ ಹೆಸ್ರಲ್ಲಿ 'ಶ್ರೀಮೋಕ್ಷ' ನಟಿಗೆ ವಂಚನೆ, ಲೈಂಗಿಕ ಕಿರುಕುಳ (Ritu Sachdeva | Big Boss | Flynn Remedios | Shri Moksha)
ಬಿಗ್ ಬಾಸ್ ಹೆಸ್ರಲ್ಲಿ 'ಶ್ರೀಮೋಕ್ಷ' ನಟಿಗೆ ವಂಚನೆ, ಲೈಂಗಿಕ ಕಿರುಕುಳ
ಮುಂಬೈ, ಶುಕ್ರವಾರ, 12 ನವೆಂಬರ್ 2010( 18:03 IST )
PR
ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕನ್ನಡದ ಶ್ರೀಮೋಕ್ಷ ಚಿತ್ರದಲ್ಲೂ ನಟಿಸಿದ್ದ ನಟಿಯೊಬ್ಬಳಿಗೆ ಆಕೆಯ ಏಜೆಂಟ್ ಲೈಂಗಿಕ ಕಿರುಕುಳ ನೀಡಿ ಸತಾಯಿಸಿದ್ದಾನಲ್ಲದೆ, ಲಕ್ಷಾಂತರ ರೂಪಾಯಿ ಹಣವನ್ನೂ ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ.
ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ರಿತು ಸಚ್‌ದೇವಾ ಎಂಬಾಕೆಯೇ ಕಿರುಕುಳಕ್ಕೀಡಾದ ಮಾಡೆಲ್ ಆಗಿದ್ದು, ಫ್ಲಿನ್ ರೆಮಿಡಿಯೋಸ್ ಎಂಬಾತ 4 ಲಕ್ಷ ರೂಪಾಯಿ ವಂಚಿಸಿರುವುದಾಗಿಯೂ ಮುಂಬೈಯ ವರ್ಸೋವಾ ಠಾಣೆಯಲ್ಲಿ ಶುಕ್ರವಾರ ಬೆಳಿಗ್ಗೆ ಆಕೆ ಕೇಸು ದಾಖಲಿಸಿದ್ದಾಳೆ.
ತನಗೆ ಚಿತ್ರರಂಗದ ಅನೇಕ ಗಣ್ಯರ ಪರಿಚಯವಿದೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿಯೂ ಛಾನ್ಸ್ ಕೊಡಿಸಬಲ್ಲೆ ಮತ್ತು ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅವಕಾಶ ಕೊಡಿಸುವುದಾಗಿ ಭರವಸೆ ನೀಡಿದ್ದ ರೆಮಿಡಿಯೋಸ್, ಸಂಗೀತದ ಆಲ್ಬಂ ಒಂದರಲ್ಲಿಯೂ ಅವಕಾಶ ದೊರಕಿಸುವುದಾಗಿ ಹೇಳಿದ್ದರಿಂದ ನಂಬಿದ ನಾನು ಆತನಿಗೆ ಹಣ ಕೊಟ್ಟಿದ್ದೆ ಎಂದು ರಿತು ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ತನ್ನ ತಾಯಿಗೆ ಹುಷಾರಿಲ್ಲ ಎಂಬ ನೆಪದಲ್ಲಿ ನನ್ನಿಂದ 50 ಸಾವಿರ ರೂ. ಪಡೆದಿದ್ದ. ನಾನು ಪದೇ ಪದೇ ವಾಪಸ್ ಕೇಳಿದ ಬಳಿಕ, ಚೆಕ್ ಕೊಟ್ಟಿದ್ದನಾದರೂ, ಅದು ಬೌನ್ಸ್ ಆಯಿತು. ಹೀಗಾಗಿ ದೂರು ನೀಡಬೇಕಾಯಿತು ಎಂದು ಸಚ್‌ದೇವಾ ಹೇಳಿದ್ದಾಳೆ. ಮಾತ್ರನಲ್ಲ, ರೆಮಿಡಿಯೋಸ್ ಲೈಂಗಿಕವಾಗಿಯೂ ಕಿರುಕುಳ ನೀಡಿದ್ದು, ತನ್ನೊಂದಿಗೆ 'ಸಹಕರಿಸುವಂತೆ' ಒತ್ತಾಯಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಎರಡು ತಿಂಗಳಿಂದ ನನಗೆ ಎಸ್ಎಂಎಸ್ ಕಳುಹಿಸುತ್ತಾ, ಅಪರಾತ್ರಿಯಲ್ಲಿ ಕರೆ ಮಾಡುತ್ತಾ, ತನ್ನೊಂದಿಗೆ 'ಸಂಬಂಧ' ಹೊಂದುವಂತೆ ಸತಾಯಿಸುತ್ತಿದ್ದ ಎಂದೂ ರಿತು ಹೇಳಿದ್ದಾಳೆ.
ಈ ಕುರಿತು ಫ್ಲಿನ್ ಪ್ರತಿಕ್ರಿಯೆ ನೀಡಿದ್ದು, ತನಗೆ ಆಕೆ ತುಂಬಾ ಅಚ್ಚುಮೆಚ್ಚು. ಆದರೆ ಆಕೆಗೆ ಕಿರುಕುಳ ನೀಡಿಲ್ಲ. ಅವಳ ಆಲ್ಬಂ ಬಿಡುಗಡೆಗಾಗಿ 3 ಲಕ್ಷ ರೂಪಾಯಿ ಪಡೆದಿರುವುದು ಹೌದು. ಆದರೆ ಆಲ್ಬಂ ಬಿಡುಗಡೆಗೆ ಆ ಹಣ ಸಾಲದಾಗಿತ್ತು ಎಂದಿದ್ದಾನೆ. ತನ್ನ ಆಲ್ಬಂ ಬಿಡುಗಡೆಯಾಗದಿರುವ ಹತಾಶೆಯಿಂದ ಆಕೆ ಈ ಆರೋಪಗಳನ್ನು ಮಾಡುತ್ತಿದ್ದಾಳೆ ಎಂದೂ ಆತ ಹೇಳಿದ್ದಾನೆ.
ಇದಕ್ಕೆ ಮೊದಲು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, ಹೈದರಾಬಾದ್‌ನ ಚಿತ್ರ ನಿರ್ಮಾಪಕ ತಾನೆಂದು ಹೇಳಿಕೊಂಡ ರಮೇಶ್ ಎಂಬಾತ, ತನ್ನೊಂದಿಗೆ ಕೆಲಸ ಮಾಡದಿದ್ದರೆ ಆಸಿಡ್ ಸುರಿಯುವುದಾಗಿ ಬೆದರಿಕೆಯೊಡ್ಡಿರುವ ಮತ್ತು ಅಸಭ್ಯವಾಗಿ ಕಾಮೆಂಟ್ ಮಾಡುತ್ತಿರುವ ಬಗ್ಗೆ ರಿತು ಪೊಲೀಸರಿಗೆ ದೂರು ನೀಡಿರುವುದು ಇಲ್ಲಿ ಉಲ್ಲೇಖಾರ್ಹ.
ಬಣ್ಣದ ಬದುಕಿನ ಸೆಳೆತಕ್ಕೊಳಗಾದವರ ಬದುಕು ಎಷ್ಟು ಅಪಾಯಕಾರಿ ಎಂಬ ಮಾತಿಗೆ ಈ ಪ್ರಕರಣ ಮಗದೊಂದು ಸಾಕ್ಷಿ.