ತನ್ನ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಅವರು ಸೋನಿಯಾ ಗಾಂಧಿ ಬಗ್ಗೆ ಹೇಳಿದ ವಿವಾದಾತ್ಮಕ ಹೇಳಿಕೆಯ ಕುರಿತು ಶುಕ್ರವಾರ ಆರೆಸ್ಸೆಸ್ ವಿಷಾದ ವ್ಯಕ್ತಪಡಿಸಿದ್ದು, ಸುದರ್ಶನ್ ಹೇಳಿಕೆಯು ಸಂಘದ ಅಭಿಪ್ರಾಯ ಅಲ್ಲ ಎಂದು ಪುನರುಚ್ಚರಿಸಿದೆ.
"ಆರೆಸ್ಸೆಸ್ ಜಂಟಿ ಕಾರ್ಯವಾಹನಾಗಿ, ಭಾವನೆಗಳಿಗೆ ಧಕ್ಕೆ ತಂದಿರುವ ಮತ್ತು ನಂತರದ ದುರದೃಷ್ಟಕರವಾದ ಬೆಳವಣಿಗೆಗಳಿಗೆ ಕಾರಣವಾಗಿರುವ ಸುದರ್ಶನ್ ನೀಡಿದ್ದಾರೆನ್ನಲಾದ ಹೇಳಿಕೆಯ ಬಗ್ಗೆ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದೇನೆ" ಎಂದು ಸಂಘದ ಮುಖಂಡ ಸುರೇಶ್ ಭಯ್ಯಾಜಿ ಜೋಷಿ ಅವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಎಲ್ಲರೂ ಶಾಂತಿ ಕಾಪಾಡಿಕೊಳ್ಳುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಸುರೇಶ್ ಜಾವಡೇಕರ್, ಈ ವಿಷಯಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ನಿಲುವೇ ಪಕ್ಷದ ನಿಲುವೂ ಆಗಿರುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯೂ ಕ್ಷಮೆ ಕೇಳಬೇಕು-ಕಾಂಗ್ರೆಸ್... ಸುದರ್ಶನ್ ಹೇಳಿಕೆ ಬಗ್ಗೆ ಆರೆಸ್ಸೆಸ್ ಮಾತ್ರವೇ ಕ್ಷಮೆ ಕೇಳಿದರೆ ಸಾಕಾಗದು, ಬಿಜೆಪಿಯೂ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಪಕ್ಷವು ಪ್ರತಿಕ್ರಿಯಿಸಿದೆ.