ರುಚಿಕಾ ಗಿರ್‌ಹೋತ್ರಾ ಎಂಬ 14ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾದ ಆರೋಪ ಮತ್ತು ಆಕೆಯ ತಮ್ಮನ ಮೇಲೂ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿ ಆರು ತಿಂಗಳ ಕಾಲ ಜೈಲುವಾಸ ಅನುಭವಿಸಿದ ಬಳಿಕ ಹರ್ಯಾಣದ ಮಾಜಿ ಡಿಜಿಪಿ ಎಸ್.ಪಿ.ಎಸ್.ರಾಥೋರ್ ಅವರು ಶುಕ್ರವಾರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡರು.
68ರ ಹರೆಯದ ರಾಥೋರ್ ಅವರು ತಪ್ಪಿತಸ್ಥರಲ್ಲ ಎಂದು ಸಿಬಿಐ ವರದಿ ಸಲ್ಲಿಸಿದ ಬಳಿಕ, ಸುಪ್ರೀಂಕೋರ್ಟು ಜಾಮೀನು ನೀಡಿತ್ತು. ಪತ್ನಿ, ವಕೀಲೆ ಆಭಾ ಅವರು ರಾಥೋರ್ ಅವರನ್ನು ಬರಮಾಡಿಕೊಂಡರೆ, ಹಿಂದೆ ವ್ಯಕ್ತಿಯೊಬ್ಬ ಅವರ ಮೇಲೆ ಆಕ್ರೋಶಗೊಂಡು ಚಾಕುವಿನಿಂದ ಇರಿದಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಭಾರೀ ಭದ್ರತೆಯನ್ನೂ ಒದಗಿಸಲಾಗಿತ್ತು.
ಅಲ್ಲಿ ಕಾಯುತ್ತಿದ್ದ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದೆಯೇ ರಾಥೋರ್ ಕಾರಿನಲ್ಲಿ ತೆರಳಿದರು. ಆಭಾ ಅವರು ಕಾನೂನಿನ ಕಟ್ಟಳೆಗಳನ್ನೆಲ್ಲಾ ಪೂರೈಸಿ, ಒಂದು ಲಕ್ಷ ರೂಪಾಯಿ ಜಾಮೀನು ಬಾಂಡ್ ಕೂಡ ನೀಡಿ ಗಂಡನನ್ನು ಬಿಡಿಸಿಕೊಂಡರು.