ಕೇಂದ್ರದ ಟೆಲಿಕಾಂ ಖಾತೆ ಸಚಿವ ಎ.ರಾಜಾ ಯಾವ ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಪುನರುಚ್ಚರಿಸಿದ್ದಾರೆ.
ಡಿಎಂಕೆ ವರಿಷ್ಠರ ಹೇಳಿಕೆಯಿಂದಾಗಿ ಸಚಿವ ರಾಜಾ ಅವರನ್ನು ಬದಲಿಸಲು ನಿರ್ಧರಿಸಿದ್ದ ಕಾಂಗ್ರೆಸ್ ಹೈಕಮಾಂಡ್‌ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸಚಿವ ಸ್ಥಾನದಲ್ಲಿ ಎ.ರಾಜಾ ಅವರನ್ನು ಮುಂದುವರಿಸುವುದರಿಂದ ಯುಪಿಎ ಸರಕಾರದ ಇಮೇಜ್‌ಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್, ಸಿಯೋಲ್‌ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಶುಕ್ರವಾರದಂದು ರಾತ್ರಿ ದೆಹಲಿಗೆ ಆಗಮಿಸಿದ್ದು, 2ಜಿ ಹಗರಣದ ಪ್ರಕರಣ ನ್ಯಾಯಾಲಯದಲ್ಲಿದೆ. ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವುದುರಿಂದ ಹೆಚ್ಚಿನ ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಎ.ರಾಜಾ, ಟೆಲಿಕಾಂ ಸಚಿವಾಲಯದ ನಿಯಮಗಳನ್ನು ಪಾಲಿಸಿದ್ದು, ಯಾವುದೇ ತಪ್ಪು ಮಾಡಿಲ್ಲ ಎಂದು ಡಿಎಂಕೆ ಪ್ರಬಲವಾಗಿ ಸಮರ್ಥಿಸಿಕೊಂಡಿದೆ.