ಈಗಾಗಲೇ ರಾಜಕೀಯ ಪಕ್ಷವೊಂದನ್ನು (ಭಾರತ್ ಸ್ವಾಭಿಮಾನ್) ಅಸ್ತಿತ್ವಕ್ಕೆ ತಂದಿರುವ ಯೋಗ ಗುರು ಬಾಬಾ ರಾಮದೇವ್ ಇದೀಗ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ದಿನಾಚರಣೆ ದಿನವಾದ ನ.14ರಂದು ದೆಹಲಿಯ ಸಂಸತ್ ಸ್ಟ್ರೀಟ್‌ನ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿಯೂ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ಎಫ್ಐಆರ್ ದಾಖಲಿಸುವ ಮೊದಲು ಬೃಹತ್ ಜನಪ್ರದರ್ಶನವನ್ನು ದೆಹಲಿಯ ಜಂತರ್-ಮಂಥರ್‌ನಲ್ಲಿ ಭಾರತ ಸ್ವಾಭಿಮಾನ್ ಜನಾಂದೋಲನ ರಾಷ್ಟ್ರೀಯ ಅಧ್ಯಕ್ಷ ರಾಮದೇವ್ ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಖ್ಯಾತ ಸಮಾಜ ಸೇವಕ ಅಣ್ಣಾ ಹಜಾರೆ, ಡಾ.ಕಿರಣ್ ಬೇಡಿ, ಧಾರ್ಮಿಕ ಮುಖಂಡ ಸ್ವಾಮಿ ಅಗ್ನಿವೇಶ್, ಡಾ.ದೇವೇಂದ್ರ ಶರ್ಮಾ, ದೆಹಲಿ ಕೆಥೋಲಿಕ್ ಚರ್ಚ್‌ನ ಅರ್ಚ್ ಬಿಷಫ್ ಡಾ.ವಿನ್ಸೆಂಟ್ ಕಸ್ನೋಸಾವ್, ಅರವಿಂದ್ ಕೆಜರಿವಾಲ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರದ ಅಕ್ರಮ ಗಣಿಗಾರಿಕೆ ಹಾಗೂ ಇತರೆ ಭ್ರಷ್ಟಾಚಾರದ ವಿರುದ್ಧ ಆಯಾ ರಾಜ್ಯಗಳಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆ ಅಕ್ರಮ ಗಣಿಗಾರಿಕೆ ವಿರುದ್ಧ ಜೆಡಿಎಸ್ ವರಿಷ್ಠ ದೇವೇಗೌಡ, ಪ್ರತಿಪಕ್ಷ ಕಾಂಗ್ರೆಸ್ ಹೋರಾಟಕ್ಕೆ ಇದೀಗ ಮತ್ತೊಂದು ಬಲ ದೊರೆತಂತಾಗಿದೆ.