ದೇಶದ ಅತಿ ದೊಡ್ಡ ಹಗರಣ ಎಂದೇ ಬಿಂಬಿತವಾಗಿರುವ 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣ ಪ್ರಕರಣದ ಆರೋಪದ ಸುಳಿಯಲ್ಲಿ ಸಿಲುಕಿರುವ ದೂರ ಸಂಪರ್ಕ ಸಚಿವ ಎ.ರಾಜಾ ಕೊನೆಗೂ ಪ್ರತಿಪಕ್ಷ ಹಾಗೂ ಆಡಳಿತಾರೂಢ ಕಾಂಗ್ರೆಸ್ ಒತ್ತಡಕ್ಕೆ ಮಣಿದು ಭಾನುವಾರ ರಾತ್ರಿ ತಮ್ಮ ರಾಜೀನಾಮೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿದ್ದಾರೆ.
ಮುಜುಗರದಿಂದ ಸರಕಾರವನ್ನು ಪಾರು ಮಾಡಲು ಮತ್ತು ಸಂಸತ್ತಿನಲ್ಲಿ ಶಾಂತಿ, ಸೌಹಾರ್ದಯುತ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ವರಿಷ್ಠರಾದ ಕರುಣಾನಿಧಿ ಅವರು ಸಲಹೆ ನೀಡಿದ್ದರಿಂದ ಅದನ್ನು ಪಾಲಿಸಿದ್ದೇನೆ ಎಂದು ರಾಜಾ ರಾಜೀನಾಮೆ ಸಲ್ಲಿಕೆ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ರಾಜಾ ಅವರು ಭಾನುವಾರ ಎರಡು ಬಾರಿ ಕರುಣಾನಿಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ದೆಹಲಿಗೆ ಆಗಮಿಸಿ ವಿಮಾನ ನಿಲ್ದಾಣದಿಂದ ನೇರವಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿಯ ಪ್ರಧಾನಿ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು.
ರಾಜಾ ಸಚಿವ ಸ್ಥಾನದಲ್ಲಿ ಮುಂದುವರಿಯುವುದನ್ನು ಸಮರ್ಥಿಸಿಕೊಳ್ಳುವುದು ಅಸಾಧ್ಯವಾಗುತ್ತಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ಪಕ್ಷದೊಳಗೆ ಕೇಳಿಬಂದಿತ್ತು. ಪ್ರಧಾನಿ ಅವರು ಸಿಯೋಲ್‌ನಿಂದ ಹಿಂತಿರುಗಿದ ನಂತರ ಈ ನಿರ್ಧಾರ ಅನಿವಾರ್ಯವಾಗಿತ್ತು. ಬೆಳಿಗ್ಗೆಯೇ ಬೆಂಬಲಿಗ ಪಕ್ಷವಾದ ಡಿಎಂಕೆಗೆ ವಿಷಯ ರವಾನಿಸಿದ ಕಾಂಗ್ರೆಸ್, ರಾಜಾ ಅವರಿಗೆ ಗೇಟ್‌ಪಾಸ್ ಕೊಡಲು ಅನುಮತಿ ಕೇಳಿತ್ತು. ಈ ಆದೇಶದ ನಂತರ ಡಿಎಂಕೆ ಎರಡು ಬಾರಿ ಸಭೆ ಸೇರಿ, ರಾಜಾ ಅವರನ್ನು ಕೈಬಿಟ್ಟು ಪ್ರಧಾನಿ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಲು ನಿರ್ಧರಿಸಿತು.
ಏತನ್ಮಧ್ಯೆ ಹಗರಣಕ ಕುರಿತಂತೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ರಾಜಾ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಯಲಿದ್ದು, ಆ ನಿಟ್ಟಿನಲ್ಲಿ ಕಾಂಗ್ರೆಸ್ ಒತ್ತಡದ ಮೇರೆಗೆ ಡಿಎಂಕೆ ರಾಜಾ ಅವರು ರಾಜೀನಾಮೆ ನೀಡುವಂತೆ ಸೂಚಿಸಿತ್ತು.
ಈ ಹಗರಣದಿಂದಾಗಿ ಸುಮಾರು ಲಕ್ಷಾಂತಾರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂರಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್(ಸಿಪಿಐಎಲ್) ಮತ್ತು ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರ ಪೀಠ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ನನ್ನ ತಲೆದಂಡಕ್ಕೆ ಖಾಸಗಿ ಕಂಪನಿಗಳ ಲಾಬಿ:ರಾಜಾ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಖಾಸಗಿ ಕಂಪನಿಗಳ ಅತಿಯಾಸೆ ನನ್ನ ತಲೆದಂಡಕ್ಕೆ ಸಂಚು ನಡೆಸುತ್ತಿವೆ ಎಂದು ದೂರ ಸಂಪರ್ಕ ಖಾತೆ ಸಚಿವ ಎ.ರಾಜಾ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಹಗರಣದ ಕುರಿತಂತೆ ರಾಷ್ಟ್ರೀಯ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಕೆಲವು ಖಾಸಗಿ ಕಂಪನಿಗಳು ಬೇಗ ಶ್ರೀಮಂತರಾಗಬೇಕು, ಹಣ ಮಾಡಿಕೊಳ್ಳಬೇಕೆಂಬ ದುರುದ್ದೇಶದಿಂದ ನಾನು ಮತ್ತು ಸರಕಾರ ಮಾಡಿದ ನಿಯಮಗಳನ್ನು ಒಪ್ಪಿಕೊಳ್ಳದೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿವೆ ಎಂದು ಕಿಡಿಕಾರಿದ್ದಾರೆ.
ಸರಕಾರಕ್ಕೆ ಹೆಚ್ಚಿನ ಆದಾಯ ಬರಬೇಕು ಎಂಬ ಉದ್ದೇಶದಿಂದ ಟೆಲಿಕಾಂ ವಲಯದಲ್ಲಿ ಭಾರೀ ಬದಲಾವಣೆ ಮತ್ತು ಸುಧಾರಣೆ ತರಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಆದರೆ, ಇದನ್ನು ಸಹಿಸಿಕೊಳ್ಳದ ಖಾಸಗಿ ಕಂಪನಿಗಳು ಹಣದ ಆಸೆಗಾಗಿ ನನ್ನ ವಿರುದ್ಧ ಸಂಚು ಮಾಡಿ ಈ ರೀತಿ ಮಿಥ್ಯಾಪವಾದವನ್ನು ನನ್ನ ಮೇಲೆ ಹೊರಿಸಿವೆ ಎಂದು ಆಪಾದಿಸಿದ್ದಾರೆ.
ಸಿಎಜಿ ವರದಿಯನ್ನು ನ್ಯಾಯಾಲಯದ ವರದಿ ಎಂದು ಒಪ್ಪಿಕೊಳ್ಳಲಾಗದು. ಇದರಲ್ಲಿ ನಾನೊಬ್ಬನೇ ಹೊಣೆಗಾರನಲ್ಲ. ಸಚಿವ ಸಂಪುಟದ ನಿರ್ಧಾರದಂತೆ ನಾನು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ರಾಜಾ ಸ್ಪಷ್ಟಪಡಿಸಿದ್ದಾರೆ.
ಕೆಲವು ಖಾಸಗಿ ಕಂಪನಿಗಳು ರಾಜಕೀಯ ಪಕ್ಷಗಳನ್ನು ಈ ಹಗರಣಕ್ಕಾಗಿ ಉಪಯೋಗ ಮಾಡಿಕೊಂಡು ನನ್ನನ್ನು ಹಾಗೂ ನನ್ನ ಪಕ್ಷ ಡಿಎಂಕೆ ಮಸಿ ಬಳಿಯುವ ಕುಟಿಲ ಹುನ್ನಾರ ಮಾಡಿವೆ ಎಂಬುದಾಗಿ ಸಂದರ್ಶನದಲ್ಲಿ ಬಯಲು ಮಾಡಿದ್ದಾರೆ.
1999ರ ರಾಷ್ಟ್ರೀಯ ದೂರ ಸಂಪರ್ಕ ನೀತಿಯನ್ನು ಅವರು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಎನ್‌ಡಿಎ ಸರಕಾರ ರೂಪಿಸಿದ ನೀತಿಯಾಗಿದೆ. ಕೇಂದ್ರದಲ್ಲಿ ಅಧಿಕಾರವನ್ನು ಯುಪಿಎ ಪಕ್ಷ ಹಿಡಿದರೂ ರಾಷ್ಟ್ರೀಯ ನೀತಿಯಲ್ಲಿ ಬದಲಾವಣೆ ಬೇಡ ಎಂಬುದನ್ನು ನಾನು ಒಪ್ಪಿಕೊಂಡಿದ್ದೆ. ಅದೇ ರೀತಿ ಸಂಸತ್ತಿನಲ್ಲಿ ನನ್ನ ಹೇಳಿಕೆಗಳ ಮೂಲಕ ಇದನ್ನು ಸ್ಪಷ್ಟಪಡಿಸಿದ್ದೇನೆ. ಹೀಗಾಗಿ ನಾನಾಗಲಿ, ಈಗಿನ ಸರಕಾರವಾಗಲಿ ಟೆಲಿಕಾಂ ಇಲಾಖೆ ಯಾವುದೇ ನಷ್ಟ ಉಂಟು ಮಾಡಿಲ್ಲ ಎಂದು ತಿಳಿಸಿದ್ದರು.