ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಡ್ಡಿ ರಾಜೀನಾಮೆಗೆ 'ಕಾಂ' ಆಗ್ರಹ | ರಾಜಾ ಬಂಧಿಸಿ: ಜಯಾ (J Jayalalithaa | A Raja | 2G scam | M Karunanidhi)
Bookmark and Share Feedback Print
 
2ಜಿ ತರಂಗಾಂತರ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ದೂರಸಂಪರ್ಕ ಸಚಿವ ಎ. ರಾಜಾ ಸಲ್ಲಿಸಿರುವ ರಾಜೀನಾಮೆ ಸಾಲದು, ಅವರನ್ನು ಬಂಧಿಸಬೇಕು ಎಂದು ಎಐಡಿಎಂಕೆ ವರಿಷ್ಠೆ ಜಯಲಲಿತಾ ಒತ್ತಾಯಿಸಿದ್ದಾರೆ.

ಇತರ ವಿಪಕ್ಷಗಳು ಕೂಡ ಕೇವಲ ರಾಜೀನಾಮೆಗೆ ತೃಪ್ತವಾಗಿಲ್ಲ. ಪ್ರಕರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಸಂಸತ್ತಿನಲ್ಲಿ ಪಟ್ಟು ಹಿಡಿದಿವೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಹಗರಣಗಳಲ್ಲೇ ಮುಳುಗಿ ಹೋಗಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದೆ.

2ಜಿ ಹಗರಣ ಮತ್ತು ಸಚಿವ ರಾಜಾ ರಾಜೀನಾಮೆ ಸಂಬಂಧ ಪ್ರತಿಕ್ರಿಯಿಸಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ, ರಾಜಾ ರಾಜೀನಾಮೆ ನೀಡಿರುವುದು ಕೇವಲ ಆರಂಭ ಮಾತ್ರ. ಪ್ರಕರಣದ ತನಿಖೆ ಕೂಲಂಕಷವಾಗಿ ನಡೆಯಬೇಕಿದೆ. ರಾಜೀನಾಮೆ ಹಗರಣಗಳು ಮುಚ್ಚಿ ಹೋಗುವ ಸಂಕೇತವಲ್ಲ ಎಂದಿದ್ದಾರೆ.

ಇಷ್ಟು ವಿಳಂಬವಾಗಿ ನೀಡಿರುವ ರಾಜೀನಾಮೆ ನೈತಿಕತೆಯನ್ನು ಎತ್ತಿ ತೋರಿಸುತ್ತಿಲ್ಲ. ತನ್ನ ವರ್ತನೆಗಳಿಂದ ರಾಜಾ ಪ್ರಧಾನ ಮಂತ್ರಿಯವರ ಕಚೇರಿ, ಸಿವಿಸಿ, ದೆಹಲಿ ಹೈಕೋರ್ಟ್, ಸಿಎಜಿ ಮತ್ತು ಸುಪ್ರೀಂ ಕೋರ್ಟನ್ನು ಅಣಕ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಸ್ವಾತಂತ್ರ್ಯೋತ್ತರ ಭಾರತ ಕಂಡ ಭಾರೀ ಹಗರಣ ಇದಾಗಿರುವುದರಿಂದ ರಾಜಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕರಣ ದಾಖಲಿಸಿ, ಬಂಧಿಸಬೇಕು. ಅವರಿಂದಾಗಿ ದೇಶಕ್ಕೆ 1,76,379 ಕೋಟಿ ರೂಪಾಯಿಗಳು ನಷ್ಟವಾಗಿದೆ. ಇದನ್ನು ಪ್ರಶ್ನಿಸುವ ಅಧಿಕಾರ ಈ ದೇಶದ ಜನರಿಗಿದೆ ಎಂದರು.

ಜಂಟಿ ಸದನ ಸಮಿತಿಗೆ ಆಗ್ರಹ...
ರಾಜಾ ರಾಜೀನಾಮೆಯಿಂದ ವಿಪಕ್ಷಗಳು ತೃಪ್ತವಾಗಿಲ್ಲ. 2ಜಿ ತರಂಗಾಂತರ ಹಂಚಿಕೆಯಲ್ಲಾಗಿರುವ ಅವ್ಯವಹಾರಗಳ ತನಿಖೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ಸೋಮವಾರ ಭಾರೀ ಕೋಲಾಹಲ ಎಬ್ಬಿಸಿವೆ.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು 'ವಿ ವಾಂಟ್ ಜೆಪಿಸಿ' ಎಂದು ಘೋಷಣೆ ಕೂಗಿದರು. ಇವರಿಗೆ ಶಿವಸೇನೆ ಮತ್ತು ಎಐಎಡಿಎಂಕೆ ಸದಸ್ಯರು ಕೈಗೂಡಿಸಿದರು. ಎಡಪಕ್ಷಗಳು ಮತ್ತು ಸಮಾಜವಾದಿ ಪಕ್ಷದ ಸದಸ್ಯರು ಕೂಡ ಸರಕಾರದ ವಿರುದ್ಧ ಮುಗಿ ಬಿದ್ದರು. ತೀವ್ರ ಕೋಲಾಹಲದಿಂದಾಗಿ ಸದನವನ್ನು ಸ್ಪೀಕರ್ ಮೀರಾ ಕುಮಾರ್ ಮುಂದೂಡಿದರು.

ಅತ್ತ ರಾಜ್ಯಸಭೆಯಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬಂತು. ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು.

ಪ್ರತಿಪಕ್ಷಗಳು ಜೆಪಿಸಿ ತನಿಖೆಗೆ ಆಗ್ರಹಿಸುತ್ತಿದ್ದರೆ, ಆಡಳಿತ ಪಕ್ಷಗಳು ಪ್ರತಿದಾಳಿ ನಡೆಸಿದವು. ಇದು ಸರಿಯಲ್ಲ, ತಮ್ಮ ಸ್ಥಾನಗಳಿಗೆ ತೆರಳಿ ಎಂದು ರಾಜ್ಯಸಭೆ ಸ್ಪೀಕರ್ ಹಮೀದ್ ಅನ್ಸಾರಿ ಸೂಚಿಸಿದರೂ, ಸದಸ್ಯರು ಪಟ್ಟು ಸಡಿಲಿಸಲಿಲ್ಲ. ನಂತರ ಸದನವನ್ನು ಮುಂದೂಡಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ