ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಡಿಎಂಕೆಗೆ ಟೆಲಿಕಾಂ ಸದ್ಯಕ್ಕಿಲ್ಲ, ಸಿಬಲ್‌ಗೆ ಹೆಚ್ಚುವರಿ ಹೊಣೆ (DMK | A Raja | Kanimozhi | Telecom Ministry)
Bookmark and Share Feedback Print
 
ಭ್ರಷ್ಟಾಚಾರ ಆರೋಪದ ಮೇಲೆ ಪಟ್ಟ ಕಳೆದುಕೊಂಡಿರುವ ಎ. ರಾಜಾ ಅವರ ದೂರಸಂಪರ್ಕ ಸಚಿವಾಲಯ ಮತ್ತೆ ಡಿಎಂಕೆ ತೆಕ್ಕೆಗೆ ಬೀಳುವ ಸಾಧ್ಯತೆಗಳು ಕ್ಷೀಣವಾಗಿದ್ದು, ಖಾತೆಯನ್ನು ಹೆಚ್ಚುವರಿಯಾಗಿ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರಿಗೆ ವಹಿಸಲಾಗಿದೆ.

ದೂರಸಂಪರ್ಕ ಸಚಿವಾಲಯದಲ್ಲಿನ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ನಡೆದಿರುವ ಭಾರೀ ಅವ್ಯವಹಾರ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಕಪ್ಪು ಮಸಿ ಬಳಿದಿರುವುದರಿಂದ ಸಚಿವಾಲಯದ ಜವಾಬ್ದಾರಿಯನ್ನು ಸಿಬಲ್ ಅವರಿಗೆ ನೀಡಲಾಗಿದೆ. ಹಗರಣದ ತನಿಖೆ ತಹಬದಿಗೆ ಬಂದ ನಂತರ ಅಥವಾ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡ ಬಳಿಕ ಇತರರಿಗೆ ವಹಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿವೆ.

ಭಾನುವಾರ ತಡರಾತ್ರಿ ರಾಜಾ ರಾಜೀನಾಮೆ ನೀಡುತ್ತಿದ್ದಂತೆ, ಆ ಸ್ಥಾನಕ್ಕೆ ಯಾರನ್ನು ನೇಮಕ ಮಾಡುವುದು ಎಂಬ ಮಾತುಕತೆಗಳು ಆರಂಭವಾಗಿದ್ದವು. ಆದರೆ ಪ್ರಧಾನಿಯವರು ದೂರಸಂಪರ್ಕ ಸಚಿವಾಲಯವನ್ನು ಸದ್ಯದ ಮಟ್ಟಿಗೆ ಡಿಎಂಕೆಗೆ ನೀಡದೇ ಇರಲು ನಿರ್ಧರಿಸಿದ್ದಾರೆ. ಇದಕ್ಕೂ ಮೊದಲು ಡಿಎಂಕೆ ವರಿಷ್ಠ-ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಕೂಡ ಇಂತಹುದೇ ನಿಲುವಿಗೆ ಬಂದಿದ್ದರು.

ಸಂಪ್ರದಾಯದ ಪ್ರಕಾರ ಸಂಸತ್ ಅಧಿವೇಶನ ನಡೆಯುತ್ತಿರುವಾಗ ಸಂಪುಟ ವಿಸ್ತರಣೆ ನಡೆಯುವುದಿಲ್ಲ. ಕಳೆದ ವಾರವಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನೇಮಕಗೊಂಡ ಪೃಥ್ವಿರಾಜ್ ಚೌಹಾನ್ ಅವರ ಜವಾಬ್ದಾರಿಯನ್ನು ಸಿಬಲ್ ಅವರಿಗೆ ವಹಿಸಲಾಗಿತ್ತು.

ಸಚಿವ ಸ್ಥಾನಕ್ಕೆ ಈಗಾಗಲೇ ಡಿಎಂಕೆಯ ಹಲವು ಸಂಸದರು ಮತ್ತು ನಾಯಕರು ವಶೀಲಿಬಾಜಿ ಆರಂಭಿಸಿದ್ದಾರೆ. ಆದರೂ ರಾಜಾ ಮೇಲಿರುವ ಆರೋಪಗಳ ಕುರಿತು ನಡೆಯಲಿರುವ ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ಸ್ಥಾನವನ್ನು ಇತರರಿಗೆ ಕೊಡದಂತೆ ಕರುಣಾನಿಧಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ರಾಜ್ಯಸಭಾ ಸದಸ್ಯೆ ಹಾಗೂ ಕರುಣಾನಿಧಿ ಪುತ್ರಿ ಕನಿಮೋಳಿ ಸಚಿವ ಸ್ಥಾನಕ್ಕೆ ಕಂಡು ಬರುತ್ತಿರುವ ಪ್ರಮುಖ ಸ್ಪರ್ಧಿ. ಇದಕ್ಕೆ ಆಕೆಯ ಸಹೋದರರಾದ ಅಳಗಿರಿ ಮತ್ತು ಸ್ಟಾಲಿನ್ ಕೂಡ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳು ಕೂಡ ಕಡಿಮೆ. ಆದರೆ ಸ್ವತಃ ಕನಿಮೋಳಿ, ತಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿಕೊಂಡಿದ್ದಾರೆ.

ರಾಜಾ ಅವರ ಸ್ಥಾನಕ್ಕೆ ತಾವು ಬರಲಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕನಿಮೋಳಿ, ಈ ಬಗ್ಗೆ ಯಾವುದೇ ಖಚಿತತೆಯಿಲ್ಲ; ಅದು ಪಕ್ಷದ ನಿರ್ಧಾರ. ಡಿಎಂಕೆ ನಾಯಕ ಕರುಣಾನಿಧಿಯವರು ನಿರ್ಣಯ ತೆಗೆದುಕೊಳ್ಳುತ್ತಾರೆ. ನಾನು ನೇಮಕವಾಗುವ ಸಾಧ್ಯತೆ ಕಡಿಮೆ ಎಂದರು.

ದೂರಸಂಪರ್ಕ ಸಚಿವಾಲಯಕ್ಕೆ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಕೇಂದ್ರ ಜವಳಿ ಸಚಿವ ಹಾಗೂ ಕರುಣಾನಿಧಿ ಅಳಿಯ ದಯಾನಿಧಿ ಮಾರನ್. ಆರೋಗ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಸಚಿವಾಲಯಗಳ ಸಂಸದೀಯ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುವ ಮಾರನ್ ಆಯ್ಕೆಯಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.

ಇದೇ ಸಾಲಿನಲ್ಲಿ ಕೇಳಿ ಬರುತ್ತಿರುವ ಮೂರನೆಯ ಹೆಸರು ಎ.ಕೆ.ಎಸ್. ವಿಜಯನ್. ಡಿಎಂಕೆಯ ದಲಿತ ನಾಯಕರಾಗಿರುವ ವಿಜಯನ್ ಮೂರನೇ ಬಾರಿ ಸಂಸದರಾಗಿದ್ದಾರೆ. ಉಳಿದಂತೆ ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್, ಹಿರಿಯ ನಾಯಕ ಟಿ.ಆರ್. ಬಾಲು ಮುಂತಾದವರಿದ್ದಾರೆ.

ಬಾಲು ಚಾರಿತ್ರ್ಯ ಅತ್ಯುತ್ತಮವಾಗಿದ್ದರೂ, ಕರುಣಾನಿಧಿ ಪುತ್ರರಾದ ಅಳಗಿರಿ ಮತ್ತು ಸ್ಟಾಲಿನ್ ಜತೆ ಉತ್ತಮ ಸಂಬಂಧ ಹೊಂದಿರದ ಕಾರಣ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳು ಕಡಿಮೆ. ಯುಪಿಎ ಮೊದಲ ಸರಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದ ಅವರನ್ನು ಎರಡನೇ ಅವಧಿಯಲ್ಲಿ ಪರಿಗಣಿಸಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ