ದೇಶದಲ್ಲಿನ ಸ್ಫೋಟ ಸೇರಿದಂತೆ ಭಯೋತ್ಪಾದನಾ ಚಟುವಟಿಕೆಗಳ ಸಂಬಂಧ ಬಂಧಿಸಲ್ಪಟ್ಟಿರುವ ಎಲ್ಲಾ ಹಿಂದೂಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದವರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ಇದರೊಂದಿಗೆ ಕಾಂಗ್ರೆಸ್-ಆರೆಸ್ಸೆಸ್ ಸಂಘರ್ಷ ಮತ್ತೊಂದು ಮಜಲಿಗೆ ತಲುಪಿದೆ.
ದೆಹಲಿಯಲ್ಲಿನ 'ಮುಸ್ಲಿಂ ಬುದ್ಧಿಜೀವಿಗಳ ವೇದಿಕೆ'ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್, ಆರೆಸ್ಸೆಸ್ ಯಾವತ್ತೂ ಮುಸ್ಲಿಮರನ್ನು ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುತ್ತಾ ಬಂದಿದೆ; ಅತ್ತ ಮತ್ತೊಂದು ಕಡೆಯಿಂದ ದೇಶದಲ್ಲಿನ ಸ್ಫೋಟಗಳಲ್ಲಿ ಬಂಧಿಸಲ್ಪಟ್ಟಿರುವ ಎಲ್ಲಾ ಹಿಂದೂಗಳು ಆರೆಸ್ಸೆಸ್ ಜತೆ ಸಂಬಂಧ ಹೊಂದಿದವರು ಎಂದರು.
ಮುಸ್ಲಿಮರು ಭಯೋತ್ಪಾದನೆಯ ಪಿತೂರಿದಾರರು ಎಂದೇ ಸಂಘ ಪರಿವಾರ ಹೇಳುತ್ತಾ ಬಂದಿದೆ. ಆದರೆ ಈಗ ಅವರದ್ದೇ ಸಂಘಟನೆಯ ಕೆಲವರು ದೇಶದ ವಿವಿಧ ಭಾಗಗಳಲ್ಲಿನ ಉಗ್ರ ಚಟುವಟಿಕೆಗಳಿಂದಾಗಿ ಜೈಲು ಸೇರಿದಾಗ ಬೊಬ್ಬೆ ಹಾಕುತ್ತಿದ್ದಾರೆ ಎಂದು ಸಿಂಗ್ ಕುಟುಕಿದರು.
ಈ ನಡುವೆ ಕಾಂಗ್ರೆಸ್‌ಗೆ ಎಚ್ಚರಿಕೆ ರವಾನಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ತರುಣ್ ವಿಜಯ್, ಸೋನಿಯಾ ಗಾಂಧಿ ವಿರುದ್ಧ ಕೆ.ಎಸ್. ಸುದರ್ಶನ್ ಮಾಡಿದ್ದ ಆರೋಪಕ್ಕಾಗಿ ಆರೆಸ್ಸೆಸ್ ಕಚೇರಿಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿರುವ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ತಪ್ಪಿದಲ್ಲಿ 2ಜಿ ತರಂಗಾಂತರ, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಆದರ್ಶ್ ವಸತಿ ಯೋಜನೆ ಹಗರಣಗಳಿಗೆ ಸಂಬಂಧಪಟ್ಟಂತೆ ಬಿಜೆಪಿಯು ರಾಷ್ಟ್ರವ್ಯಾಪಿ ಮುಷ್ಕರಗಳನ್ನು ನಡೆಸಲಿದೆ ಎಂದಿದ್ದಾರೆ.
ಗಡ್ಕರಿ ಆಸ್ತಿ-ಪಾಸ್ತಿ ತನಿಖೆ ನಡೆಯಲಿ.. ಒಂದು ಕಾಲದಲ್ಲಿ ಏನೂ ಇಲ್ಲದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಇಂದು ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಹೊಂದುವುದು ಹೇಗೆ ಸಾಧ್ಯವಾಗಿದೆ ಎಂದು ಪ್ರಶ್ನಿಸಿರುವ ದಿಗ್ವಿಜಯ್ ಸಿಂಗ್, ಈ ಕುರಿತು ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಒಂದು ಕಾಲದಲ್ಲಿ ಸಾಮಾನ್ಯನಾಗಿದ್ದ ವ್ಯಕ್ತಿಯೊಬ್ಬ ಇಂದು ಭಾರೀ ಆಸ್ತಿ ಹೊಂದುವುದು ಹೇಗೆ ಸಾಧ್ಯ ಎಂಬುವುದು ಎಲ್ಲರಿಗೂ ತಿಳಿಯಬೇಕು. ಕಳೆದ 20 ವರ್ಷಗಳಲ್ಲಿ ಅವರು ಆಸ್ತಿ ಮಾಡಿಕೊಂಡಿರುವ ರೀತಿಯನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು ಎಂದು ಸಿಂಗ್ ಆಗ್ರಹಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಆಪ್ತ ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಗಡ್ಕರಿ ಆರೋಪಿಸಿದ್ದಕ್ಕೆ ಪ್ರತಿಯಾಗಿ ದಿಗ್ವಿಜಯ್ ಸಿಂಗ್ ಮೇಲಿನಂತೆ ಆರೋಪ ಮಾಡಿದ್ದಾರೆ.
ಆರೆಸ್ಸೆಸ್ ನಿಷೇಧಿಸಿ: ಪಾಸ್ವಾನ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಆರೆಸ್ಸೆಸ್ ಮಾಜಿ ವರಿಷ್ಠ ಕೆ.ಎಸ್. ಸುದರ್ಶನ್ ನೀಡಿರುವ ಮಾನಹಾನಿಕರ ಎಂದು ಹೇಳಲಾಗಿರುವ ಹೇಳಿಕೆಯನ್ನು ಖಂಡಿಸಿರುವ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್, ಆರೆಸ್ಸೆಸ್ ಮೇಲೆ ತಕ್ಷಣವೇ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ.
ಆರೆಸ್ಸೆಸ್ ಈ ದೇಶದ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವ ಸಂಘಟನೆ. ಇದನ್ನು ತಕ್ಷಣವೇ ನಿಷೇಧಿಸಬೇಕು ಎಂದು ಒತ್ತಾಯಿಸಿರುವ ಅವರು, ವಿವಾದಿತ ಹೇಳಿಕೆ ಸಂಬಂಧ ಸುದರ್ಶನ್ ಅವರು ಸೋನಿಯಾರಲ್ಲಿ ಕ್ಷಮೆ ಯಾಚಿಸಬೇಕು ಎಂದರು.