ಯುಪಿಎ ಸರಕಾರದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಸಾಕಷ್ಟು ಅಧಿಕಾರ ಹೊಂದಿರುವ ಹೊರತಾಗಿಯೂ ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯೇ 'ರಿಯಲ್ ಪವರ್' ಎಂದು ಕೇಂದ್ರ ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದಾರೆ.
PTI
ಎಲ್ಲರಿಗೂ ತಿಳಿದಿರುವಂತೆ ಸೋನಿಯಾ ಗಾಂಧಿಯೇ ನೈಜ ಅಧಿಕಾರ ಹೊಂದಿದ್ದಾರೆ. ಆದರೆ ಮನಮೋಹನ್ ಸಿಂಗ್ ನಿಜವಾದ ಪ್ರಧಾನ ಮಂತ್ರಿ ಎಂದು ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಅಭಿಪ್ರಾಯಪಟ್ಟರು.
ಕೇಂದ್ರದಲ್ಲಿ ನಿಜವಾದ ಅಧಿಕಾರ ಹೊಂದಿರುವುದು ಪ್ರಧಾನಿ ಸಿಂಗ್ ಅಲ್ಲ, ಸೋನಿಯಾ ಗಾಂಧಿ-- ಹೌದೇ? ಎಂದು ಪ್ರಶ್ನಿಸಿದ್ದಕ್ಕೆ ಖುರ್ಷೀದ್ ಮೇಲಿನಂತೆ ಉತ್ತರಿಸಿದರು.
ಸಚಿವರೊಬ್ಬರು ಸಂಪುಟದಲ್ಲಿ ಮುಂದುವರಿಯಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುವುದು ಸೋನಿಯಾರೋ ಅಥವಾ ಸಿಂಗ್ ಅವರೋ ಎಂದು ಪ್ರಶ್ನಿಸಿದಾಗ, ಸಿಂಗ್-ಸೋನಿಯಾ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಸಂಪುಟ ಸಚಿವರೊಬ್ಬರ ಕುರಿತು ತೆಗೆದುಕೊಳ್ಳಬೇಕಾದ ನಿರ್ಧಾರಗಳಲ್ಲಿ ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡುವುದು ಪ್ರಧಾನ ಮಂತ್ರಿಯವರ ವಿಶೇಷ ಹಕ್ಕುಗಳ ಮೇಲೆ ನಡೆಯುವ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಲಾಯಿತು.
ಇದಕ್ಕೂ ಸಮರ್ಥನೆಯ ಉತ್ತರವನ್ನು ನೀಡಿದ ಖುರ್ಷೀದ್, 'ಇಲ್ಲ, ಇದು ಉಲ್ಲಂಘನೆಯಲ್ಲ. ಅವರು ಪ್ರಧಾನ ಮಂತ್ರಿ, ಜವಾಬ್ದಾರಿಯನ್ನು ಅವರೇ ಹೊಂದಿರುತ್ತಾರೆ. ಆದರೆ ಸೋನಿಯಾ ಗಾಂಧಿ ನಮ್ಮ ಪಕ್ಷದ ನಾಯಕಿ' ಎಂದರು.
ಕಾಮನ್‌ವೆಲ್ತ್ ಗೇಮ್ಸ್ ಬಹುಕೋಟಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಮತ್ತು ಕ್ರೀಡಾ ಸಚಿವ ಎಂ.ಎಸ್. ಗಿಲ್ ಹೆಸರುಗಳು ಥಳಕು ಹಾಕಿಕೊಂಡಿರುವ ಹೊರತಾಗಿಯೂ ಅವರು ತಮ್ಮ ಕಚೇರಿಗಳಲ್ಲಿ ಮುಂದುವರಿಯುವುದು ಎಷ್ಟು ಸರಿ ಎಂದಾಗ, ತನಿಖೆ ಪೂರ್ತಿಗೊಳ್ಳಲಿ; ಅದಕ್ಕೂ ಮೊದಲು ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸಚಿವರು ಉತ್ತರಿಸಿದರು.