ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ; ಯಾಕ್ರೀ ಸುಮ್ಮನಿದ್ದೀರಿ?: ಪ್ರಧಾನಿಗೆ ಸುಪ್ರೀಂ (Subramanian Swamy | 2G spectrum scam | Manmohan Singh | Supreme Court)
Bookmark and Share Feedback Print
 
2ಜಿ ತರಂಗಾಂತರ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಎ. ರಾಜಾ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎರಡು ವರ್ಷಗಳ ಹಿಂದೆಯೇ ಸುಬ್ರಮಣ್ಯನ್ ಸ್ವಾಮಿ ಮನವಿ ಮಾಡಿಕೊಂಡಿದ್ದರೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಯಾವುದೇ ಕ್ರಮ ಕೈಗೊಳ್ಳದೆ ಯಾಕೆ ಸುಮ್ಮನಿದ್ದಾರೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

2ಜಿ ತರಂಗಾಂತರ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು 2008ರಲ್ಲೇ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿಯವರು ಪ್ರಧಾನಿಯವರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದೇ ಇದ್ದಾಗ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹಗರಣ ಆರೋಪಗಳ ಕುರಿತು ಕೇಂದ್ರ ಸರಕಾರವು ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದೆ.

ಹಗರಣಗಳ ಕುರಿತು ಪ್ರಧಾನಿಯವರು ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತು ಮೌನವಾಗಿರುವುದು ಸಮಸ್ಯೆಗಳನ್ನು ಸೃಷ್ಟಿಸಿದೆ. ಸಿಬಿಐ ತನಿಖೆ ನಡೆಯದೇ ಇರುವ ಹೊತ್ತಿನಲ್ಲಿ ಕಾನೂನಿನಂತೆ ಮೂರು ತಿಂಗಳ ಒಳಗೆ ಎ. ರಾಜಾ ವಿರುದ್ಧ ಪ್ರಧಾನಿಯವರು ಯಾಕೆ ಕ್ರಮ ಕೈಗೊಂಡಿಲ್ಲ. ಎರಡು ವರ್ಷಗಳ ಹಿಂದೆ ಸ್ವಾಮಿಯವರು ನೀಡಿರುವ ದೂರಿಗೆ 15 ತಿಂಗಳ ನಂತರ ಪ್ರಧಾನಿಯವರ ಕಚೇರಿ ಉತ್ತರಿಸಿದೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ವಾಮಿ 2008ರಲ್ಲೇ ಪ್ರಧಾನಿ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸರಕಾರ ಎಲ್ಲೆಲ್ಲಿ ತಪ್ಪು ಹಾದಿಗಳನ್ನು ತುಳಿದಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿತ್ತು.

2ಜಿ ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಎರಡು ವರ್ಷಗಳ ಹಿಂದೆಯೇ ಸ್ವಾಮಿಯವರು ಪ್ರಧಾನಿಯವರಿಗೆ ಲಿಖಿತವಾಗಿ ಹೇಳಿದ್ದರು. ರಾಜಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದರು. ಆದರೆ ಇದುವರೆಗೂ ಪ್ರಧಾನಿ ಅಥವಾ ಪ್ರಧಾನ ಮಂತ್ರಿಯವರ ಕಚೇರಿ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ ಸುಮ್ಮನಿರುವುದು ಯಾಕೆ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾನು ಮಾಡಿರುವ ಮನವಿಯ ಸಂಬಂಧ ನಿರ್ಧಾರ ಕೈಗೊಳ್ಳುವಂತೆ ಪ್ರಧಾನಿಯವರಿಗೆ ನಿರ್ದೇಶನ ನೀಡಬೇಕು ಎಂದು ಸುಬ್ರಮಣ್ಯನ್ ಸ್ವಾಮಿಯವರು ಸುಪ್ರೀಂ ಕೋರ್ಟಿಗೆ ವಿಶೇಷ ರಜಾಕಾಲದ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನವೆಂಬರ್ 18ರ ಗುರುವಾರ ಮುಂದುವರಿಯಲಿದೆ.

2ಜಿ ತರಂಗಾಂತರ ಹರಾಜು ನಡೆಸದೆ ಹಂಚಿಕೆ ನಡೆಸಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಗಿರುವ ರಾಜಾ ವಿರುದ್ಧ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ನಂತರ ಕಳೆದ ಭಾನುವಾರ ದೂರಸಂಪರ್ಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಅಕ್ರಮಗಳು ನಡೆದಿದೆ ಎನ್ನುವುದು ಬಹಿರಂಗವಾದ ನಂತರ ಈ ಬೆಳವಣಿಗೆಗಳು ನಡೆದಿವೆ.
ಸಂಬಂಧಿತ ಮಾಹಿತಿ ಹುಡುಕಿ