ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಾ ಗೇಟ್‌ಪಾಸ್ ಖುಷಿಗೆ 'ಸ್ಟಾಲಿನ್' ಭೋಜನ ಕೂಟ! (Karunanidhi | Maran brothers | M K Stalin | M K Alagiri | 2G spectrum)
ಟೆಲಿಕಾಂ ಖಾತೆ ಮಾಜಿ ಸಚಿವ ಎ.ರಾಜಾ ಅವರಿಗೆ ಕೇಂದ್ರ ಸಚಿವ ಸಂಪುಟದಿಂದ ಗೇಟ್‌ಪಾಸ್ ನೀಡುತ್ತಿದ್ದಂತೆಯೇ ಮಾರನ್ ಸಹೋದರರು ಹಾಗೂ ಅವರ ಚಿಕ್ಕಪ್ಪಂದಿರಾದ (ಕರುಣಾನಿಧಿ ಮಕ್ಕಳು) ಎಂ.ಕೆ.ಸ್ಟಾಲಿನ್, ಎಂ.ಕೆ.ಅಳಗಿರಿ ನಗರದ ಪಂಚತಾರಾ ಹೊಟೇಲೊಂದರಲ್ಲಿ ಸೇರಿ ಭೂರಿ ಭೋಜನ ಮಾಡಿರುವ ವಿಷಯ ಬಯಲಾಗಿದೆ.
ಇದೊಂದು ಕುಟುಂಬದ ಔತಣ ಕೂಟ ಎಂದು ನಿಕಟವರ್ತಿಗಳು ಹೇಳಿರುವರಾದರೂ ರಾಜಾ ಹೊರಹೋಗಿದ್ದಕ್ಕೂ ಇದಕ್ಕೂ ಗಾಢ ಸಂಬಂಧವಿದೆ ಎಂದೇ ರಾಜಕೀಯ ಪಂಡಿತರು ಹೇಳುತ್ತಾರೆ.
ಭಾನುವಾರ ಸಂಜೆ ಕಲಾನಿಧಿ ಮತ್ತು ದಯಾನಿಧಿ ಮಾರನ್, ಅವರ ಕುಟುಂಬ ಮತ್ತು ಗೆಳೆಯರಿಗಾಗಿ ಅದ್ದೂರಿ ಔತಣಕೂಟ ಏರ್ಪಡಿಸಿದ್ದರು. ಪಶ್ಚಿಮ ತಮಿಳುನಾಡಿನಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸ್ಟಾಲಿನ್ ವಿಮಾನ ಇಳಿದವರು ನೇರವಾಗಿ ಔತಣಕೂಟಕ್ಕೆ ಆಗಮಿಸಿದ್ದರು.
ಸ್ಪೆಕ್ಟ್ರಂ ವಿವಾದದಿಂದ ದೂರವೇ ಉಳಿದಿದ್ದ ಕರುಣಾನಿಧಿಯವರ ಹಿರಿಯ ಪುತ್ರ ಅಳಗಿರಿ ಮಧುರೈಯಿಂದ ಔತಣಕ್ಕಾಗಿಯೇ ಚೆನ್ನೈಗೆ ಆಗಮಿಸಿದರು. ರಾಜಾ ಅವರ ಬಿಕ್ಕಟ್ಟನ್ನು ಕುರಿತಾದ ಡಿಎಂಕೆ ಸಭೆಗಳು ಹಾಗೂ ಸಂಸತ್ತಿನಿಂದ ಬಹಳ ದಿನದಿಂದ ದೂರ ಉಳಿದಿರುವ ಅಳಗಿರಿ ಇದಕ್ಕೆ ನ.18ರಂದು ಮಧುರೈಯಲ್ಲಿ ನಡೆಯಲಿರುವ ತಮ್ಮ ಪುತ್ರನ ವಿವಾಹವನ್ನು ನೆಪವನ್ನಾಗಿ ಒಡ್ಡಿದ್ದರು. ಅಂಥ ಕಾರಣಗಳ ನಡುವೆಯೂ ಅವರು ಔತಣಕ್ಕೆ ಬಂದಿದ್ದಾರೆ ಅಂದರೆ ಇದಕ್ಕೆ ಬೇರೇನೊ ಮಹತ್ವವಿದೆ ಎಂಬುದು ಈಗಿನ ಲೆಕ್ಕಚಾರವಾಗಿದೆ.
2ಜಿ ತರಂಗಾಂತರ ಹಗರಣ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿತ್ತು. ಈ ಸಂದರ್ಭದಲ್ಲಿ ಡಿಎಂಕೆ ವರಿಷ್ಠ, ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ರಾಜಾ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಅದೇ ರೀತಿ ಪುತ್ರಿ, ಸಂಸದೆ ಕನಿಮೋಳಿ ಕೂಡ ನೈತಿಕ ಬೆಂಬಲ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆದರೂ ಕರುಣಾನಿಧಿ ಪುತ್ರರಾದ ಸ್ಟಾಲಿನ್, ಅಳಗಿರಿ, ಮಾರನ್ ಸಹೋದರರು ರಾಜಾ ತಲೆದಂಡದ ಖುಷಿಗೆ ಭೋಜನ ಕೂಟ ಏರ್ಪಡಿಸಿರುವುದರ ಹಿಂದಿನ ರಹಸ್ಯ ಏನು ಎಂಬುದು ರಾಜಕೀಯ ವಲಯದಲ್ಲಿ ಹಲವಾರು ಊಹಾಪೋಹಗಳು ಕೇಳಿಬರುತ್ತಿದೆ.