ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೆರೆಯ ನೀರನ್ನು ಕೆರೆಗೆ ಚೆಲ್ಲಲು ಹೋಗಿ ಸಿಕ್ಕಿ ಬಿದ್ದ ಶೇಖ್!
(Thief | two-wheeler | Naim Rahim Shaikh | Jeevan Sadhu Shedge)
ಕೆರೆಯ ನೀರನ್ನು ಕೆರೆಗೆ ಚೆಲ್ಲಲು ಹೋಗಿ ಸಿಕ್ಕಿ ಬಿದ್ದ ಶೇಖ್!
ಪುಣೆ, ಬುಧವಾರ, 17 ನವೆಂಬರ್ 2010( 11:17 IST )
ಕದ್ದ ವಸ್ತೊಂದನ್ನು ಮರಳಿ ಅದರ ಮಾಲಕನಿಗೆ ಮಾರಾಟ ಮಾಡಲು ಹೋದರೆ ಹೇಗಿರುತ್ತದೆ? ಅಂತಹ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಬೈಕೊಂದಕ್ಕೆ ಕೈಕೊಟ್ಟು ನಂತರ ಅದನ್ನು ವಾರಸುದಾರನಿಗೇ ಮಾರಲು ಹೋಗಿ ಸಿಕ್ಕಿ ಬಿದ್ದು ಜೈಲು ಸೇರಿದ್ದಾನೆ.
ಇದು ನಡೆದಿರುವುದು ಪುಣೆಯ ಉರಾಲಿ ಕಾಂಚನ್‌ನಲ್ಲಿನ ತುಪೆವಾಸ್ತಿ ಎಂಬಲ್ಲಿ. ಇಲ್ಲಿನ ಸ್ಕೂಟರ್ ಮೆಕ್ಯಾನಿಕ್ ನಯೀಮ್ ರಹೀಮ್ ಶೇಖ್ (27) ಎಂಬಾತ ಹದಾಪ್ಸಾರ್‌ನಲ್ಲಿನ ಸತವಾಡಿ ಎಂಬಲ್ಲಿನ ಜೀವನ್ ಸಂಧು ಶೆಡ್ಜ್ ಎಂಬವರಿಗೆ ಸೇರಿದ 'ಬಜಾಜ್ ಪ್ಲಾಟಿನಾ' ಬೈಕನ್ನು ಕಳ್ಳತನ ಮಾಡಿದ್ದ. ಇಷ್ಟೇ ಆಗುತ್ತಿದ್ದರೆ ಶೇಖ್ ಗ್ರಹಚಾರ ಕೆಡುತ್ತಿರಲಿಲ್ಲ. ಅದನ್ನು ಸ್ವತಃ ಜೀವನ್‌ಗೆ ಮಾರಾಟ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.
ವಿಶೇಷವೆಂದರೆ ಇಷ್ಟು ಬೇಗ, ತಾನು ಮಾಡಿದ್ದು ನಿಜಕ್ಕೂ ದೊಡ್ಡ ತಪ್ಪು ಎಂದು ಶೇಖ್ ಹೇಳುತ್ತಿರುವುದು. ಕೆಲ ದಿನಗಳ ಹಿಂದಷ್ಟೇ ಕೆಲಸ ಕಳೆದುಕೊಂಡಿದ್ದೆ. ಹಣ ಜರೂರಾಗಿ ಬೇಕಾಗಿತ್ತು. ನನಗಿದ್ದ ದಾರಿ ಕಳ್ಳತನ ಮಾತ್ರ. ಮನೆ ಬಾಡಿಗೆಯನ್ನೇ ನೀಡಿರಲಿಲ್ಲ. ಖಂಡಿತಾ ಮುಂದೆ ಇಂತಹ ಕೆಲಸ ಮಾಡಲ್ಲ ಅಂತ ಹೇಳ್ತಿದ್ದಾನೆ.
ಇನ್ನು ಬೈಕ್ ಕಳ್ಳತನ-ಮಾರಾಟದ ಕಥೆಯನ್ನು ಕೇಳಿ.
ಕಳ್ಳತನಕ್ಕಾಗಿ ಹೊಂಚು ಹಾಕುತ್ತಿದ್ದ ಶೇಖ್ ಕಣ್ಣಿಗೆ ಬಜಾಜ್ ಬೈಕು ಬಿದ್ದಿತ್ತು. ನಂತರ ಜೀವನ್‌ಗೆ ಬಜಾಜ್ ಪ್ಲಾಟಿನಾ ಬೈಕ್ ಅಗತ್ಯವಿದೆ ಎಂಬುದು ಯಾರದೋ ಮೂಲಕ ತಿಳಿದು ಬಂತು. ದೂರವಾಣಿ ಸಂಖ್ಯೆಯೂ ಸಿಕ್ಕಿತು. ಸರಿ ಎಂದು ಜೀವನ್‌ಗೆ ಫೋನ್ ಮಾಡಿ ಬೈಕ್ ಇದೆ ಎಂದು ಶೇಖ್ ವಿವರಿಸಿದ್ದ.
ಅದರಂತೆ ಬೈಕ್ ನೋಡಬೇಕು ಎಂದು ಜೀವನ್ ಹೇಳಿದ್ದ. ರಸ್ತೆ ಬದಿಯ ರೆಸ್ಟಾರೆಂಟ್ ಒಂದರಲ್ಲಿ ಇಬ್ಬರೂ ಭೇಟಿಯಾಗಿ ಬೈಕ್ ನೋಡಿದಾಗ, ಜೀವನ್‌ಗೆ ಅಚ್ಚರಿ. ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ತನ್ನದೇ ಬೈಕ್ ಎಂಬುದು ಮನದಟ್ಟಾಗಿತ್ತು. ಶೇಖ್‌ನನ್ನು ಹಿಡಿಯಲೆತ್ನಿಸಿ ವಿಫಲರಾದಾಗ, ಇತರರಿಗೆ ಕೂಗಿದರೂ ಆರೋಪಿ ತಪ್ಪಿಸಿಕೊಂಡಿದ್ದ.
ಜೀವನ್ ಮತ್ತು ಜನರಿಂದ ಹೇಗೋ ತಪ್ಪಿಸಿಕೊಂಡ ಶೇಖ್‌ಗೆ ತನ್ನ ಗ್ರಹಚಾರ ನೆಟ್ಟಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ ಪೊಲೀಸರು ಇಷ್ಟು ಬೇಗ ತನ್ನ ಹಿಂದೆ ಬಿದ್ದಿದ್ದಾರೆ ಎಂಬ ಅರಿವು ಇರಲಿಲ್ಲ. ಸ್ವಲ್ಪ ದೂರ ಹೋಗುತ್ತಿದ್ದಂತೆ ಪಕ್ಕದ ಮಾರ್ಗದ ಪೊಲೀಸರು ಕೈ ಅಡ್ಡ ಹಾಕಿದಾಗ ಎಲ್ಲವೂ ಮುಗಿಯಿತೆಂಬಂತೆ ಶೇಖ್ ಶರಣಾದ.
ಮತ್ತೆ ಕಳ್ಳತನಕ್ಕೆ ಮುಂದಾಗುವುದಿಲ್ಲ ಎಂದು ಶೇಖ್ ಈಗ ಹೇಳುತ್ತಿದ್ದಾನೆ.