ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ದ್ರೌಪದಿ' ಕೃತಿಗೆ ನನ್ನ ಪತ್ನಿಯೇ ಪ್ರೇರಣೆ: ವೀರಪ್ಪ ಮೊಯ್ಲಿ
(Law Minister | Drupati | Veerappa Moily | Sree Ramayana Mahanveshanan)
'ದ್ರೌಪದಿ' ಕೃತಿಗೆ ನನ್ನ ಪತ್ನಿಯೇ ಪ್ರೇರಣೆ: ವೀರಪ್ಪ ಮೊಯ್ಲಿ
ನವದೆಹಲಿ, ಬುಧವಾರ, 17 ನವೆಂಬರ್ 2010( 11:19 IST )
ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯವನ್ನು ಲೋಕಾರ್ಪಣೆ ಮಾಡಿದ ನಂತರವೂ ಸುಮ್ಮನಾಗದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಈಗ 'ದ್ರೌಪದಿ' ಕೃತಿಯನ್ನು ಕೈಗೆತ್ತಿಕೊಂಡಿದ್ದಾರೆ. ಇದಕ್ಕೆ ತನ್ನ ಧರ್ಮಪತ್ನಿ ಮಾಲತಿಯೇ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.
ಮಹಾಭಾರತದ ಕೇಂದ್ರ ಬಿಂದುವಾಗಿರುವ ಪಾಂಚಾಲದ ದೊರೆ ದ್ರುಪದನ ಪುತ್ರಿ, ಪಂಚ ಪಾಂಡವರ ಪತ್ನಿ ಪಾಂಚಾಲಿಯನ್ನು (ದ್ರೌಪದಿ) ಬಣ್ಣಿಸುವ, ಆಕೆಯ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸಕ್ಕೆ ಕೈ ಹಾಕಿರುವ ಮೊಯ್ಲಿ, ಸಮಾಜವನ್ನು ಪುನರ್ ನಿರ್ಮಿಸುವುದು ಹೇಗೆ ಎಂಬುದನ್ನು ಮಹಿಳೆಯರಿಗೆ ತಿಳಿಸಿಕೊಡುವ ಕೆಲಸ ಇದರಿಂದ ಆಗಲಿದೆ ಎನ್ನುತ್ತಿದ್ದಾರೆ.
PTI
ರಾಜಕಾರಣದಲ್ಲಿ ವ್ಯಸ್ತರಾಗಿರುವ ಮೊಯ್ಲಿಗೆ ಲೇಖನ, ಗ್ರಂಥ ಬರೆಯಲು ಸಮಯ ಎಲ್ಲಿರುತ್ತದೆ? ಯಾರೋ ಬರೆದ ಪುಸ್ತಕಕ್ಕೆ ತನ್ನ ಹೆಸರು ಹಾಕಿಕೊಂಡು ಪ್ರಚಾರ ಪಡೆದುಕೊಳ್ಳುತ್ತಾರೆ ಎನ್ನುವುದು ಟೀಕಾಕಾರರ ಮಾತು. ಇದನ್ನು ಕಿವಿಗೆ ಹಾಕಿಕೊಳ್ಳದಷ್ಟು ದೊಡ್ಡದಾಗಿ ಮೂಡಬಿದಿರೆಯ ಮೊಯ್ಲಿ ಬೆಳೆದಿದ್ದರೂ, ಪರೋಕ್ಷ ಸ್ಪಷ್ಟನೆಗಳನ್ನು ನೀಡುವಲ್ಲಿ ಹಿಂದೆ ಬಿದ್ದಿಲ್ಲ.
ಕೆಲ ವರ್ಷಗಳ ಹಿಂದಷ್ಟೇ 'ಶ್ರೀರಾಮಾಯಣ ಮಹಾನ್ವೇಷಣಂ' ಮಹಾಕಾವ್ಯವನ್ನು ಬರೆದಿದ್ದ ಮೊಯ್ಲಿಯವರು ಇಷ್ಟು ಬೇಗ ಮತ್ತೊಂದು ಕೃತಿಯನ್ನು ಸಿದ್ಧಪಡಿಸುತ್ತಾರೆಂದರೆ? ಅದು ಹತ್ತಿಪ್ಪತ್ತು ಪುಟಗಳ ಕೃತಿಯಲ್ಲ. ಆದರೆ ಅದು ತನ್ನಿಂದ ಸಾಧ್ಯ ಎನ್ನುವುದು ಮೊಯ್ಲಿಯವರ ಮಾತಿನ ತಾತ್ಪರ್ಯ.
ಪ್ರತಿದಿನ ರಾತ್ರಿ 12 ಗಂಟೆಗೆ ಮಲಗುತ್ತೇನೆ. ಆದರೆ ಮುಂಜಾನೆ ನಾಲ್ಕು ಗಂಟೆಗೆಲ್ಲ ಎದ್ದು ಬಿಡುತ್ತೇನೆ. ನಂತರವೇನಿದ್ದರೂ ನನ್ನ ಕೆಲಸ ಬರವಣಿಗೆ. ಅನಿವಾರ್ಯ ಕಾರಣಗಳಿಂದ ಬರೆಯುವುದನ್ನು ಒಂದು ದಿನ ತಪ್ಪಿಸಿದರೆ ಆ ದಿನ ಮನಸ್ಸು ಸರಿಯಿರುವುದಿಲ್ಲ ಎಂದು ಮೊಯ್ಲಿ ಹೇಳಿದ್ದಾರೆ.
ದ್ರೌಪದಿ ಮಹಾಕಾವ್ಯಕ್ಕೆ ನನ್ನ ಪತ್ನಿ ಮಾಲತಿಯೇ ಪ್ರೇರಣೆ. ಈಗಾಗಲೇ ಸುಮಾರು ಶೇ.60ರಷ್ಟು ಬರೆದು ಮುಗಿಸಿದ್ದೇನೆ. ನಾನು ಖಂಡಿತಾ ಕೀರ್ತಿ, ಪ್ರಶಂಸೆ, ಪ್ರಚಾರ ಅಥವಾ ಲಾಭಗಳಿಗಾಗಿ ಕೃತಿಗಳನ್ನು ಬರೆಯುತ್ತಿಲ್ಲ. ಈ ಹಿಂದೆ ಗಮಕ ವಾಚನ ಮಾಡುತ್ತಿದ್ದೆ. ಸತತ ಅಧ್ಯಯನದ ಬಳಿಕ ಕಾವ್ಯ ಬರೆಯುತ್ತಿದ್ದೇನೆ ಎಂದರು.
ಪ್ರಾಚೀನ ಕಾವ್ಯಗಳನ್ನು ತನ್ನದೇ ರೀತಿಯಲ್ಲಿ ಚಿತ್ರಿಸುತ್ತಿದ್ದೇನೆ. ಇಲ್ಲಿ ಆಶಯಗಳು ಆಧುನಿಕತೆಯನ್ನು ಹೊಂದಿರುತ್ತವೆ, ವ್ಯಕ್ತಿಯ ಪಾತ್ರದ ಚಿತ್ರಣವೂ ನನ್ನದೇ ಆಗಿರುತ್ತದೆ. ಜನರಿಗೆ ಸಂದೇಶ ನೀಡುವಂತಹ ಕಾವ್ಯ ನೀಡುವುದು ನನ್ನ ಬಯಕೆ ಎಂದರು.
ಮೊಯ್ಲಿಯವರ ಕೃತಿ, ಕವನ ಸಂಕಲನ, ನಾಟಕಗಳಿವು: ತೆಂಬರೆ, ಕೊಟ್ಟ, ಸುಳಿಗಾಳಿ, ಸಾಗರದೀಪ, ಮಿಲನ, ಪರಾಜಿತ, ಪ್ರೇಮವೆಂದರೆ, ಹಾಲು-ಜೇನು ಮತ್ತೆ, ನಡೆಯಲಿ ಸಮರ, ಯಕ್ಷಪ್ರಶ್ನೆ, ಶ್ರೀ ರಾಮಾಯಣ ಮಹಾನ್ವೇಷಣಂ.