ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂಗಳೂರು ವಿಮಾನ ದುರಂತ; ಗೊರಕೆ ಹೊಡೆದಿದ್ದ ಪೈಲಟ್! (Mangalore air crash | Captain Zlatko Glusica | Capt H S Ahluwalia | Air Indian Express)
Bookmark and Share Feedback Print
 
ಇದೇ ವರ್ಷದ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತಕ್ಕೆ ವಿದೇಶಿ ಪೈಲಟ್ ನಿರ್ಲಕ್ಷ್ಯವೇ ಕಾರಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿದ್ದೆ ಮಾಡಿರುವುದು ಮಾತ್ರವಲ್ಲ, ಪೈಲಟ್ ಗೊರಕೆ ಹೊಡೆದಿರುವ ಸದ್ದು ಕೂಡ ವಿಮಾನದ ಸಿವಿಆರ್‌ನಲ್ಲಿ ದಾಖಲಾಗಿದೆ ಎಂದು ವರದಿಗಳು ಹೇಳಿವೆ.

ದುಬೈಯಿಂದ 160 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳನ್ನು ಹೊತ್ತು ತರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ 812 (ಬೋಯಿಂಗ್ 737-8HG) ವಿಮಾನವು ಮೇ 22ರಂದು ಬೆಳಿಗ್ಗೆ 6.30ಕ್ಕೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಪೈಲಟ್ ಪ್ರಮಾದದಿಂದ ಪತನಗೊಂಡಿತ್ತು. ದುರಂತದಲ್ಲಿ 158 ಮಂದಿ ಬಲಿಯಾಗಿದ್ದರು.
PTI

ಈ ಸಂಬಂಧ ನೇಮಕಗೊಳಿಸಲಾಗಿದ್ದ ವಿಚಾರಣಾ ಸಮಿತಿಯು ತನ್ನ ಅಂತಿಮ ವರದಿಯನ್ನು ಕೇಂದ್ರ ವಾಯುಯಾನ ಸಚಿವಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಪೈಲಟ್ ಪ್ರಮಾದ ಸೇರಿದಂತೆ ಇತರ ಹಲವು ವಿಚಾರಗಳನ್ನು ನಮೂದಿಸಲಾಗಿದೆ.

ವಿಮಾನ ದುರಂತ ಸಂಪೂರ್ಣವಾಗಿ ವಿದೇಶಿ ಪೈಲಟ್ ಕ್ಯಾಪ್ಟನ್ ಜ್ಲಾಟ್ಕೋ ಗ್ಲೂಸಿಕಾ ಪ್ರಮಾದದಿಂದ ಸಂಭವಿಸಿದೆ. ದುಬೈಯಿಂದ ಮಂಗಳೂರಿಗೆ ವಿಮಾನ ಹಾರುತ್ತಿದ್ದ ಸಂದರ್ಭದಲ್ಲಿ ಅವರು ವಿಮಾನದಲ್ಲೇ ಸುಮಾರು 90 ನಿಮಿಷಗಳ ಕಾಲ ನಿದ್ದೆ ಮಾಡಿದ್ದರು. ಗ್ಲೂಸಿಯಾ ವಿಮಾನದಲ್ಲಿ ಗೊರಕೆ ಹೊಡೆಯುತ್ತಿರುವ ಸದ್ದು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನಲ್ಲಿ (ಸಿವಿಆರ್) ದಾಖಲಾಗಿದೆ ಎಂದು ಅಮೆರಿಕಾ ರಾಷ್ಟ್ರೀಯ ಪ್ರಯಾಣ ಸುರಕ್ಷತಾ ಮಂಡಳಿ ತಿಳಿಸಿದೆ.

ಭಾರತೀಯ ಸಹ ಪೈಲಟ್ ಕ್ಯಾಪ್ಟನ್ ಎಚ್.ಎಸ್. ಅಹ್ಲುವಾಲಿಯಾರವರು ಅಪಾಯವಿದೆ ಎಂದು ನೀಡಿದ್ದ ಎಚ್ಚರಿಕೆಗಳನ್ನು ಕೂಡ ಗ್ಲೂಸಿಕಾ ನಿರ್ಲಕ್ಷಿಸಿದ್ದರು. ತಕ್ಷಣಕ್ಕೆ ವಿಮಾನ ಇಳಿಸುವುದು ಬೇಡ ಎಂದು ಅಹ್ಲುವಾಲಿಯಾ ಹೇಳಿದ್ದರೂ ಗಮನಕ್ಕೆ ತೆಗೆದುಕೊಂಡಿರಲಿಲ್ಲ ಎಂದು ಸಿವಿಆರ್ ದಾಖಲೆಗಳನ್ನು ಆಧರಿಸಿ ತನಿಖಾ ತಂಡ ವರದಿ ಮಾಡಿದೆ.

ವಿಮಾನವು ಸರಿಯಾದ ಪಥದಲ್ಲಿ ಇಳಿಯದೇ ಇದ್ದಾಗ ಕಂಪ್ಯೂಟರುಗಳು ತಕ್ಷಣವೇ ವಿಮಾನವನ್ನು ಟೇಕ್-ಆಫ್ ಮಾಡುವಂತೆ ಪೈಲಟ್‌ಗೆ ಸೂಚನೆ ನೀಡಿದ್ದವು. ಇದೇ ಸಂದರ್ಭದಲ್ಲಿ ಅಹ್ಲುವಾಲಿಯಾ ಕೂಡ ಗೋ ಅರೌಂಡ್ ಎಂದು ಗ್ಲೂಸಿಕಾಗೆ ಹೇಳಿದ್ದರು. ಕೆಲವೇ ಸೆಕುಂಡುಗಳಲ್ಲಿ ಕೈಗೊಳ್ಳಬೇಕಾಗಿದ್ದ ಈ ಕ್ರಮಗಳನ್ನು ಗ್ಲೂಸಿಕಾ ಕೈಗೊಂಡಿರಲಿಲ್ಲ.

ಈ ಹೊತ್ತಿನಲ್ಲಿ ಪೈಲಟ್ ಗ್ಲೂಸಿಕಾ ವಿಮಾನದ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿದ್ದರು. ಟೇಬಲ್-ಟಾಪ್ ರನ್‌ವೇ ಹೊಂದಿರುವ ಬಜ್ಪೆ ವಿಮಾನ ನಿಲ್ದಾಣದ ಕಂಪೌಂಡ್‌ಗೆ ಮೊದಲು ಡಿಕ್ಕಿ ಹೊಡೆದ ವಿಮಾನ, ನಂತರ ರನ್‌ವೇ ಮುಂದಿದ್ದ ಆಳವಾದ ಕಮರಿಯತ್ತ ಮುನ್ನುಗ್ಗಿ ಪತನಗೊಂಡಿತು ಎಂದು ವರದಿ ತಿಳಿಸಿದೆ.

'ನಮಗಿನ್ನು ಮುಂದೆ ರನ್‌ವೇ ಉಳಿದಿಲ್ಲ' ಎಂದು ವಿಮಾನ ಪತನವಾಗುವ ಕೊನೆಯ ಕೆಲವು ಕ್ಷಣಗಳಲ್ಲಿ ಹೇಳಿರುವುದು ಸಿವಿಆರ್‌ನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಇದರ ನಂತರ ಸಿವಿಆರ್‌ನಲ್ಲಿ ದಾಖಲಾಗಿರುವುದು ಪತನದ ಭಾರೀ ಸದ್ದು. ಈ ನಡುವೆ 'ಓ ಮೈ ಗಾಡ್' ಎಂದು ಹೇಳಿರುವುದು ಕೂಡ ರೆಕಾರ್ಡರಿನಲ್ಲಿದೆ.

ವಾಯುಯಾನ ಸಚಿವಾಲಯವು ದುರಂತದ ಅಂತಿಮ ವರದಿಯನ್ನು ಸ್ವೀಕರಿಸಿರುವುದರಿಂದ ಇದೇ ಅಧಿವೇಶನದ ಸಂದರ್ಭದಲ್ಲಿ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ