ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಗ್ ಬಾಸ್, ರಾಖಿಗೆ ಕೇಂದ್ರ ಬ್ರೇಕ್; ಹಗಲು ಪ್ರಸಾರ ನಿಷೇಧ (Bigg Boss 4 | Rakhi Ka Insaaf | IB Ministry | Rakhi Sawanth)
Bookmark and Share Feedback Print
 
ಏನೇನೋ ಪ್ರಸಾರ ಮಾಡಿ ಸಭ್ಯ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದ್ದ ರಿಯಾಲಿಟಿ ಶೋಗಳ ವಿರುದ್ಧ ಕೇಂದ್ರ ಸರಕಾರ ಕೊನೆಗೂ ಛಾಟಿ ಬೀಸಿದೆ. ಅಶ್ಲೀಲ ದೃಶ್ಯಗಳನ್ನು ಒಳಗೊಂಡ ಯಾವುದೇ ಕಾರ್ಯಕ್ರಮಗಳನ್ನು ಪ್ರೈಮ್ ಟೈಮ್‌ನಲ್ಲಿ ಪ್ರಸಾರ ಮಾಡಬಾರದು ಎಂದು ಸರಕಾರ ಕಟ್ಟಪ್ಪಣೆ ಹೊರಡಿಸಿದೆ.

ಬಿಗ್ ಬಾಸ್ 4 ಮತ್ತು ರಾಖಿ ಕಾ ಇನ್ಸಾಫ್ ರಿಯಾಲಿಟಿ ಶೋಗಳು ವಯಸ್ಕರದ್ದಾಗಿರುವುದರಿಂದ ಹಗಲು ಹೊತ್ತು ಪ್ರಸಾರ ಮಾಡಬಾರದು. ಇದು ಮಕ್ಕಳ ವೀಕ್ಷಣೆಗೆ ಯೋಗ್ಯವಾದುದಲ್ಲ. ಅದನ್ನು ರಾತ್ರಿ 11ರಿಂದ ಬೆಳಿಗ್ಗೆ 5ರ ನಡುವೆ ಮಾತ್ರ ಪ್ರಸಾರ ಮಾಡುವಂತೆ ಸಂಬಂಧಪಟ್ಟ ಟಿವಿ ಚಾನೆಲ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಎರಡೂ ಕಾರ್ಯಕ್ರಮಗಳು ಸಾರ್ವತ್ರಿಕ ವೀಕ್ಷಣೆಗೆ ಯೋಗ್ಯವಾದುದಲ್ಲ. ಹಾಗಾಗಿ ಇದನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ಪ್ರಸಾರ ಮಾಡಬೇಕು. ಈ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ಇತರ ಸಮಯದಲ್ಲಿ ಮರು ಪ್ರಸಾರ ಮಾಡುವುದು ಅಥವಾ ಸುದ್ದಿವಾಹಿನಿಗಳು ಮರು ಪ್ರಸಾರ ಮಾಡುವುದು ಅಥವಾ ಸುದ್ದಿ ಕಾರ್ಯಕ್ರಮಗಳಲ್ಲಿ ತೋರಿಸುವುದು ಸಲ್ಲದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ 'ಬಿಗ್ ಬಾಸ್ 4' ಕಾರ್ಯಕ್ರಮ 'ಕಲರ್ಸ್' ಚಾನೆಲ್‌ನಲ್ಲಿ ಹಾಗೂ ರಾಖಿ ಸಾವಂತ್ ನಡೆಸುತ್ತಿರುವ 'ರಾಖಿ ಕಾ ಇನ್ಸಾಫ್' ಎನ್‌ಡಿಟಿವಿ ಇಮ್ಯಾಜಿನ್ ಚಾನೆಲ್‌ಗಳಲ್ಲಿ ಪ್ರೈಮ್ ಟೈಮ್‌ನಲ್ಲಿ ಪ್ರಸಾರವಾಗುತ್ತಿದೆ.

ಸಾರ್ವಜನಿಕರು, ಸಂಸದರು, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಸಮಾಜ ಸೇವಕರು ಹಲವು ದೂರುಗಳನ್ನು ನೀಡಿದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಬರಲಾಗಿದೆ. ಇವೆರಡೂ ರಿಯಾಲಿಟಿ ಶೋಗಳನ್ನು ವಯಸ್ಕರ ಕಾರ್ಯಕ್ರಮಗಳು ಎಂದು ಪರಿಗಣಿಸಲಾಗಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಜತೆಗೆ ತೆಲುಗು ಸಂಗೀತ ವಾಹಿನಿಯ ಮೇಲೆ ಸಚಿವಾಲಯವು ಏಳು ದಿನಗಳ ನಿಷೇಧ ಹೇರಿದೆ. ನಗ್ನ ದೃಶ್ಯಗಳನ್ನು ಪ್ರಸಾರ ಮಾಡಿರುವುದಕ್ಕಾಗಿ 'ಎಸ್ಎಸ್ ಮ್ಯೂಸಿಕ್' ಚಾನೆಲ್ ಒಂದು ವಾರ ಪ್ರಸಾರ ನಿಲ್ಲಿಸಬೇಕು ಎಂದು ಆದೇಶ ನೀಡಲಾಗಿದೆ.

ರಾಖಿ ಕಾ ಇನ್ಸಾಫ್ ಕಾರ್ಯಕ್ರಮದಲ್ಲಿ ಲಕ್ಷ್ಯಂ ಪ್ರಸಾದ್ ಎಂಬ ವ್ಯಕ್ತಿಯೊಬ್ಬನನ್ನು ಐಟಂ ಬೆಡಗಿ ರಾಖಿ ಸಾವಂತ್ 'ನಾಮರ್ದ' ಎಂದು ಮೂದಲಿಸಿದ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದ. ಈ ರೀತಿ ಅವಹೇಳನಕಾರಿಯಾಗಿ ಟೀಕಿಸಿದ ನಂತರ ಆತ ಕೆಲವು ದಿನಗಳ ಕಾಲ ಊಟವನ್ನೇ ಮಾಡದೆ ನಂತರ ಆತ್ಮಹತ್ಯೆ ಮಾಡಿದ್ದ ಎಂದು ಆತನ ಕುಟುಂಬದವರು ಆರೋಪಿಸಿದ್ದರು.

ಅತ್ತ ಬಿಗ್ ಬಾಸ್ ಕಾರ್ಯಕ್ರಮದ ಕಥೆಯೂ ಇದೇ ರೀತಿಯದ್ದು. ಹಲವು ಜನಪ್ರಿಯ ಮಂದಿ ಪಾಲ್ಗೊಂಡಿರುವ ಈ ರಿಯಾಲಿಟಿ ಶೋದಲ್ಲಿ ಅಸಭ್ಯ ಭಾಷೆಯನ್ನು ಬಳಸುತ್ತಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ