ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 15, 16, 18; ಹುಡುಗಿಯರ ಮದುವೆ ವಯಸ್ಸು ಯಾವುದು? (Supreme Court | child marriage | Hindu Marriage Act | Sharia law)
Bookmark and Share Feedback Print
 
ವೈವಾಹಿಕ ವಯಸ್ಸಿಗೆ ಸಂಬಂಧಪಟ್ಟ ಕಾನೂನುಗಳಲ್ಲಿ ಹಲವು ಗೊಂದಲಗಳಿವೆ. ಹಿಂದೂ ವಿವಾಹ ಕಾಯ್ದೆ, ಶರಿಯತ್ ಕಾನೂನು, ಬಾಲ್ಯ ವಿವಾಹ ತಡೆ ಕಾಯ್ದೆ, ಅತ್ಯಾಚಾರ ಕಾನೂನುಗಳು ಹುಡುಗ ಮತ್ತು ಹುಡುಗಿಯ ಮದುವೆ ವಯಸ್ಸಿನಲ್ಲಿ ಸಮಾನತೆ ಹೊಂದಿಲ್ಲ. ಈ ಬಗ್ಗೆ ವಿಸ್ತೃತ ಅಫಿಡವಿತ್ ಸಲ್ಲಿಸಿ ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

ದೇಶದಲ್ಲಿ ಅಪ್ರಾಪ್ತ ಹೆಣ್ಮಕ್ಕಳ ಮದುವೆಗಳನ್ನು ತಡೆಯಲು ಕೆಲವು ಕಾನೂನುಗಳೇ ಅಡ್ಡಿಯಾಗುತ್ತಿವೆ. ಬಾಲ್ಯ ವಿವಾಹವನ್ನು ನಿಷೇಧ ಮಾಡಿದ್ದರೂ ಅದರ ಧ್ಯೇಯ ಈಡೇರುತ್ತಿಲ್ಲ. ಈ ವಿಚಾರವು ಇಡೀ ದೇಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಪ್ರಾಪ್ತರ ಮದುವೆಗಳಿಗೆ ಅವಕಾಶ ನೀಡಿದಲ್ಲಿ, ಬಾಲ್ಯ ವಿವಾಹಗಳ ನಿಷೇಧದ ಒಟ್ಟಾರೆ ಉದ್ದೇಶಕ್ಕೆ ಸೋಲಾಗುತ್ತದೆ. ಕಾನೂನುಗಳಲ್ಲಿರುವ ಹಲವು ಅಸಂಗತತೆಗಳ ಕುರಿತು ಸರಕಾರ ಪ್ರತಿಕ್ರಿಯೆ ನೀಡಬೇಕು. ನೀಡದೇ ಇದ್ದರೆ ಇರುವ ಸಮಸ್ಯೆಗಳನ್ನು ಸುಧಾರಿಸಲು ನಾವು ಅಗತ್ಯ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ದಳವೀರ್ ಭಂಡಾರಿ ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ಪೀಠವು ಹೇಳಿದೆ.

ಈ ಸಂಬಂಧ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರಿಗೆ ಅಫಿಡವಿತ್ ಸಲ್ಲಿಸಲು ಪೀಠವು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಅದಕ್ಕೂ ಮೊದಲು ಪೀಠದ ಎದುರು ವಾದಿಸಿದ ಜೈಸಿಂಗ್, ಜಾರಿಯಲ್ಲಿರುವ ಹಲವು ಕಾನೂನುಗಳಲ್ಲಿರುವ ಅಸಂಗತತೆಗಳನ್ನು ಕಾನೂನು ಆಯೋಗದ ಶಿಫಾರಸಿನಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಕಾನೂನುಗಳಲ್ಲಿರುವ ಹಲವು ಅಸಂಗತತೆಗಳ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ದೂರು ನೀಡಿದ ನಂತರ ಸುಪ್ರೀಂ ಕೋರ್ಟ್ ಈ ನಿರ್ದೇಶನವನ್ನು ಸರಕಾರಕ್ಕೆ ನೀಡಿದೆ. ಕಾನೂನುಗಳ ಲೋಪವು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಧ್ಯೇಯವನ್ನು ವಿಫಲಗೊಳಿಸುತ್ತದೆ ಎಂದು ಆಯೋಗ ವಾದಿಸಿತ್ತು.

1929ರ ಬಾಲ್ಯ ವಿವಾಹ ತಡೆ ಕಾಯ್ದೆ, 1995ರ ಹಿಂದೂ ವಿವಾಹ ಕಾಯ್ದೆ ಮತ್ತು ಮಕ್ಕಳ ಆರೈಕೆ ಮತ್ತು ರಕ್ಷಣೆಗಾಗಿನ 2000ರ ಬಾಲ ನ್ಯಾಯ ಕಾನೂನುಗಳನ್ನು ಜಾರಿಗೊಳಿಸಲು ಇಂತಹ ಅಸಂಗತತೆಗಳು ಸಮಸ್ಯೆಗಳನ್ನುಂಟು ಮಾಡಿವೆ ಎಂದು ಮಹಿಳಾ ಆಯೋಗ ತಿಳಿಸಿದೆ.

ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಮೇಲೆ ಹೇಳಿರುವ ಕಾನೂನುಗಳು, ಭಾರತೀಯ ದಂಡ ಸಂಹಿತೆ ಮತ್ತು ಶರಿಯತ್ ಕಾನೂನುಗಳು ಹಲವು ಅಸಂಗತತೆಗಳನ್ನು ಹೊಂದಿದೆ. ಇದು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪುಗಳಲ್ಲಿ ಪ್ರತಿಫಲನಗೊಂಡಿದೆ.

ಇದಕ್ಕೆ ಆಯೋಗ ಉದಾಹರಣೆಗಳನ್ನೂ ನೀಡಿದೆ. ಬಾಲ್ಯ ವಿವಾಹ ತಡೆ ಕಾನೂನು ಹುಡುಗಿ ಮತ್ತು ಹುಡುಗ 18 ಮತ್ತು 21ರ ಒಳಗಿನ ವಯಸ್ಸಿನವರಾಗಿರಬಾರದು ಎಂದು ಹೇಳುತ್ತದೆ. ಆದರೆ ವರ ಅಥವಾ ವಧುವಿನ ವಯಸ್ಸನ್ನು ಆಧರಿಸಿ ಆ ಮದುವೆಯನ್ನು ಅನೂರ್ಜಿತ ಎಂದು ಘೋಷಿಸಲು ನ್ಯಾಯಾಲಯಕ್ಕೆ ಹಿಂದೂ ವಿವಾಹ ಕಾಯ್ದೆಯು ಅಧಿಕಾರ ನೀಡುವುದಿಲ್ಲ.

ವ್ಯಕ್ತಿಯೊಬ್ಬ ವಯಸ್ಕನಲ್ಲ ಎಂದು ಹೇಳಲು 18 ವರ್ಷದೊಳಗಿರಬೇಕು ಎಂದು ಬಾಲಾಪರಾಧಿಗಳ ನ್ಯಾಯ ಕಾಯ್ದೆಯು ಹೇಳುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯು ಅಂತಹ ಯಾವುದೇ ವಿವರಣೆಯನ್ನು ಕೊಟ್ಟಿಲ್ಲ. ಅಲ್ಲದೆ ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಸಂಪರ್ಕ ನಡೆಸಲು 16 ವರ್ಷಗಳ ವಯಸ್ಸನ್ನು ನಿಗದಿಪಡಿಸಿದೆ.

ಅತ್ಯಾಚಾರಕ್ಕೆ ಸಂಬಂಧಪಟ್ಟ ಕಾನೂನುಗಳಲ್ಲೂ ಇಂತಹುದೇ ಭಿನ್ನ ನಿಲುವುಗಳಿವೆ. ಓರ್ವ ವ್ಯಕ್ತಿ 15ರ ವಯಸ್ಸನ್ನು ದಾಟಿದ ತನ್ನ ಪತ್ನಿಯೊಡನೆ ಲೈಂಗಿಕ ಚಟುವಟಿಕೆ ನಡೆಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಈ ವಿಧಿ ಹೇಳುತ್ತದೆ.

ಮುಸ್ಲಿಮರ ವೈಯಕ್ತಿಕ ಕಾನೂನು ಶರಿಯತ್ ಕಾನೂನಿನ ಕಥೆಯೂ ಭಿನ್ನವಲ್ಲ. ಅದರ ಪ್ರಕಾರ ಹುಡುಗ-ಹುಡುಗಿಯ ಮದುವೆ ವಯಸ್ಸು 15. ಇದು ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ಸಂಪೂರ್ಣ ವಿರುದ್ಧವಾದುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ