ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅವರು ಕಡಿದದ್ದು ಉಪನ್ಯಾಸಕನ ಕೈ, ಜನರ ಮನಸ್ಸನ್ನಲ್ಲ! (Kerala lecturer | TJ Joseph | Prophet | Muslim fundamentalists)
Bookmark and Share Feedback Print
 
ಪ್ರಶ್ನೆಪತ್ರಿಕೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ನಾಲ್ಕು ತಿಂಗಳ ಹಿಂದೆ ಧರ್ಮಾಂಧ ಮೂಲಭೂತವಾದಿಗಳಿಂದ ಕೈ ಕತ್ತರಿಸಿಕೊಂಡಿದ್ದ ಕೇರಳದ ಉಪನ್ಯಾಸಕ ಟಿ.ಜೆ. ಜೋಸೆಫ್, ಘಟನೆಯ ನಂತರ ಕಾಣಿಸಿಕೊಂಡ ಮೊದಲ ಸಾರ್ವಜನಿಕ ಭೇಟಿಯಲ್ಲಿ ಭಾರೀ ಜನ ಬೆಂಬಲ ಪಡೆದುಕೊಂಡಿದ್ದಾರೆ.
PR

ಜೋಸೆಫ್ ಅವರಿಗೆ ಐಕ್ಯತೆ ಮತ್ತು ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅವರ ಸಹಪಾಠಿಗಳು ಮತ್ತು ಬುದ್ಧಿಜೀವಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ತನ್ನ ಬೆಂಬಲಿಗರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜೋಸೆಫ್, 'ವಿವಿಧ ಭಾಗಗಳಿಂದ ಜನ ನೀಡಿರುವ ಬೆಂಬಲ ನನ್ನನ್ನು ಆರ್ದ್ರನನ್ನಾಗಿಸಿದೆ. ಅದೇ ಕಾರಣದಿಂದ ನನ್ನ ಮೇಲೆ ನಡೆದ ಪೈಶಾಚಿಕ ದಾಳಿ ಅಥವಾ ಸೇವೆಯಿಂದ ವಜಾಗೊಳಿಸಿರುವುದು ನನ್ನ ದೃಢ ಸಂಕಲ್ಪವನ್ನು ದುರ್ಬಲಗೊಳಿಸಿಲ್ಲ. ಜನರ ಪ್ರೀತಿ ಮತ್ತು ಹಾರೈಕೆಗಳೇ ನನ್ನ ಕಣ್ಣೀರನ್ನು ಒರೆಸಿದೆ' ಎಂದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಿದ ಆರೋಪದ ಮೇಲೆ ಸೇವೆಯಿಂದ ವಜಾಗೊಳಿಸಿದ ನ್ಯೂಮನ್ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಜೋಸೆಫ್ ಈಗ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದ ನಂತರ ಕಾಲೇಜು ಕೈಗೊಂಡ ಕಠಿಣ ಕ್ರಮದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರೂ, ಆಡಳಿತ ಮಂಡಳಿಯು ತನ್ನ ಪಟ್ಟು ಸಡಿಲಿಸದೆ ಕ್ರಮವನ್ನು ಸಮರ್ಥಿಸಿಕೊಂಡಿತ್ತು.

ಕಾಲೇಜು ಆಡಳಿತ ಮಂಡಳಿಯು ಸಂಧಾನಕ್ಕೆ ಒಪ್ಪಬಹುದು ಎಂಬುದು ನಮ್ಮ ಯೋಚನೆ. ಆದರೆ ಈ ಕುರಿತು ನನಗೆ ಸಂಶಯಗಳಿವೆ. ಇಲ್ಲಿ ಸಂಧಾನದ ಯಾವುದೇ ಸಂಕೇತಗಳು ನನಗೆ ಕಾಣಿಸುತ್ತಿಲ್ಲ ಎಂದು ಉಪನ್ಯಾಸಕ ಜೋಸೆಫ್ ಅವರ ಸಹೋದರಿ ಮರಿಯಾ ಸ್ಟೆಲ್ಲಾ ಅಭಿಪ್ರಾಯಪಟ್ಟರು.

ಈ ಪ್ರಕರಣವನ್ನು ವಿಶ್ವವಿದ್ಯಾಲಯ ವಿಚಾರಣಾ ಸಮಿತಿ ಮುಂದಿನ ವಾರ ವಿಚಾರಣೆ ನಡೆಸಲಿದೆ. ಆಪ್ತರು ಮತ್ತು ಹಿತೈಷಿಗಳು ನೀಡಿರುವ ಬೆಂಬಲ ಮತ್ತು ಪ್ರೋತ್ಸಾಹಗಳು ಜತೆಗಿರುವುದರಿಂದ ಕಾನೂನು ಹೋರಾಟ ಕಷ್ಟವಾಗದು ಎನ್ನುವುದು ಉಪನ್ಯಾಸಕರ ವಿಶ್ವಾಸ.

ಮರುನೇಮಕಕ್ಕೆ ಸಿಪಿಐಎಂ ಒತ್ತಾಯ...
ಮುಸ್ಲಿಂ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಿಂದ ಕೈ ಕತ್ತರಿಸಿಕೊಂಡು ನಂತರ ಕೆಲಸವನ್ನೂ ಕಳೆದುಕೊಂಡಿರುವ ಜೋಸೆಫ್ ಅವರ ವಜಾವನ್ನು ರದ್ದುಪಡಿಸಿ, ಕೆಲಸಕ್ಕೆ ಮರು ನೇಮಕ ಮಾಡಬೇಕು ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕಿಸ್ಟ್) ಒತ್ತಾಯಿಸಿದೆ.

ಜೋಸೆಫ್ ಅವರನ್ನು ಕೆಲಸದಿಂದ ವಜಾಗೊಳಿಸಿರುವುದು ಅವರ ಕೈ ಕತ್ತರಿಸಿದಷ್ಟೇ ಕ್ರೂರ ಮತ್ತು ಅಮಾನವೀಯವಾದುದಾಗಿದೆ. ತಾನು ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶಗಳನ್ನು ಹೊಂದಿರಲಿಲ್ಲ ಎಂದು ಜೋಸೆಫ್ ಪದೇ ಪದೇ ಮನವಿಯಲ್ಲಿ ಹೇಳಿಕೊಂಡಿರುವ ಹೊರತಾಗಿಯೂ ಅವರನ್ನು ವಜಾಗೊಳಿಸಿರುವುದು ನ್ಯಾಯಯುತವಾದ ನಿರ್ಧಾರವಲ್ಲ ಎಂದು ಸಿಪಿಐಎಂ ಕೇರಳ ಕಾರ್ಯದರ್ಶಿ ಪಿನರಯಿ ವಿಜಯನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ