ಬಿಜೆಪಿ ಸರಕಾರವನ್ನು ವಜಾಗೊಳಿಸಿ: ಸಂಸತ್ತಿನಲ್ಲಿ ಕಾಂಗ್ರೆಸ್
ನವದೆಹಲಿ, ಗುರುವಾರ, 18 ನವೆಂಬರ್ 2010( 11:46 IST )
ಬಹುಕೋಟಿ ಭೂ ಹಗರಣದಲ್ಲಿ ಮುಳುಗೇಳುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರು ಆಗ್ರಹಿಸಿದ್ದಾರೆ.
NRB
ಇದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ, ಎಡಪಕ್ಷಗಳು, ಎಐಎಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು 2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ತಮ್ಮ ಆಗ್ರಹವನ್ನು ಮುಂದುವರಿಸಿದ್ದವು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಂಸದರು ಪ್ರಮುಖ ಪ್ರತಿಪಕ್ಷದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ತಿರುಗೇಟು ನೀಡಿದರು.
'ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿ', 'ಭೂ ಹಗರಣದಲ್ಲಿ ಸಿಲುಕಿರುವ ಕರ್ನಾಟಕ ಸರಕಾರವನ್ನು ವಜಾಗೊಳಿಸಿ' ಎಂಬ ರೀತಿಯ ಭಿತ್ತಿಪತ್ರಗಳನ್ನು ಹಿಡಿದ ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ್ ಮತ್ತು ಇತರ ಕಾಂಗ್ರೆಸ್ ಸಂಸದರು, ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕರ್ನಾಟಕದ ಬಿಜೆಪಿ ಸರಕಾರವನ್ನು ವಜಾಗೊಳಿಸಬೇಕು. ಮುಖ್ಯಮಂತ್ರಿಯವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರ ಕೆಲವು ಪಕ್ಷಗಳ ಸಂಸದರು ಆಗ್ರಹಿಸಿದರು.
ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ಆರೋಪಗಳಲ್ಲಿ ಮುಳುಗಿ ಕೋಲಾಹಲ ಏರ್ಪಟ್ಟಾಗ ಸದನವನ್ನು ನಿಯಂತ್ರಿಸಲು ಸ್ಪೀಕರ್ ಮೀರಾ ಕುಮಾರ್ ಯತ್ನಿಸಿದರಾದರೂ ಫಲ ಕೊಡಲಿಲ್ಲ. ನಂತರ ಕಲಾಪವನ್ನು ಅನಿವಾರ್ಯವಾಗಿ ಮುಂದೂಡಿದರು.