ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರ ಸುಳ್ಳು: ಸ್ವಾಮಿ | ತಕ್ಷಣ ಉತ್ತರಿಸಿ: ಸಿಂಗ್‌ಗೆ ಸುಪ್ರೀಂ (2G scam | Supreme Court | Manmohan Singh | A Raja)
Bookmark and Share Feedback Print
 
2ಜಿ ತರಂಗಾಂತರ ಹಂಚಿಕೆಗೆ ಸಂಬಂಧಪಟ್ಟಂತೆ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ದೂರಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪರವಾಗಿ ಕೇಂದ್ರ ಸರಕಾರವು ನಾಳೆಯೊಳಗೆ ಉತ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಗಡುವು ವಿಧಿಸಿದೆ.

ಈ ನಡುವೆ ಹೇಳಿಕೆ ನೀಡಿರುವ ದೂರುದಾರ ಜನತಾಪಕ್ಷದ ವರಿಷ್ಠ ಸುಬ್ರಮಣ್ಯನ್ ಸ್ವಾಮಿ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಸುಳ್ಳು ಹೇಳುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

ಪ್ರಧಾನಿ ಸಿಂಗ್ ನಾಳೆಯೊಳಗೆ (ಶುಕ್ರವಾರ) ತನ್ನ ಪ್ರತಿಕ್ರಿಯೆ ಸಲ್ಲಿಸಬೇಕು. ದೂರುದಾರ ಸುಬ್ರಮಣ್ಯ ಸ್ವಾಮಿ ಈ ಸಂಬಂಧ ಉತ್ತರಿಸಲು ನವೆಂಬರ್ 22ರ ವರೆಗೆ ಕಾಲಾವಕಾಶವಿದೆ. ಮರುದಿನ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆ ನಡೆಸುತ್ತದೆ ಎಂದು ಸುಪ್ರೀಂ ತನ್ನ ಆದೇಶದಲ್ಲಿ ಗುರುವಾರ ತಿಳಿಸಿದೆ.

ಮೊನ್ನೆ ಮಂಗಳವಾರವಷ್ಟೇ ಪ್ರಧಾನಿ ಸಿಂಗ್‌ರನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿತ್ತು. 2ಜಿ ಹಗರಣದ ಸಂಬಂಧ ಎ. ರಾಜಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ವಾಮಿ ಹಲವು ಪತ್ರಗಳನ್ನು ಬರೆದಿದ್ದರೂ, ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದದ್ದು ಯಾಕೆ ಎಂದು ಪ್ರಶ್ನಿಸಿತ್ತು.

ರಾಜಾ ವಿರುದ್ಧ ಕ್ರಮ ಕೈಗೊಳ್ಳಲು ಒಪ್ಪಿಗೆ ಸೂಚಿಸುವಂತೆ 2008ರಲ್ಲಿ ಸ್ವಾಮಿ ಪ್ರಧಾನಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರಧಾನಿಯವರ ಕಚೇರಿ ಉತ್ತರಿಸಿದ್ದು 16 ತಿಂಗಳುಗಳ ನಂತರ 2010ರಲ್ಲಿ.

ದೇಶದ ನಾಗರಿಕನಾಗಿ ಈ ರೀತಿಯಲ್ಲಿ ಪ್ರಶ್ನಿಸಲು ಸ್ವಾಮಿ ಕಾನೂನಿನಲ್ಲಿ ಹಕ್ಕು ಹೊಂದಿದ್ದಾರೆ. ಇಲ್ಲಿ ಸಂಬಂಧಪಟ್ಟವರು ಕ್ರಮಕ್ಕೆ ಆದೇಶಿಸಲು ಒಪ್ಪಿಗೆ ನೀಡುವುದು ಅಥವಾ ನೀಡದೇ ಇರುವುದನ್ನು ಮಾಡಬಹುದು. ಆದರೆ ಈಗಲೇ ಕ್ರಮ ಕೈಗೊಳ್ಳಲಾಗದು ಎಂದು ಹೇಳುವುದು ಬೇರೆಯದೇ ಅರ್ಥವನ್ನು ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅದೇ ಹೊತ್ತಿಗೆ ಪ್ರಧಾನ ಮಂತ್ರಿಯವರ ಕಚೇರಿಯುವ ಸ್ವಾಮಿಯವರ ಪತ್ರಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಎಂಬ ವಾದವನ್ನು ಸರಕಾರವನ್ನು ಇಂದು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯನ್ ತಳ್ಳಿ ಹಾಕಿದ್ದಾರೆ. ಪ್ರಧಾನಿಯವರು ಹಲವು ಪತ್ರಗಳನ್ನು ಸ್ವಾಮಿಯವರಿಗೆ ಬರೆದಿದ್ದಾರೆ ಎಂದು ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಕಟ್ಟುಕತೆಯ ಸತ್ಯ: ಸ್ವಾಮಿ
ತನ್ನ ಪತ್ರಗಳಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅಥವಾ ಕೇಂದ್ರ ಸರಕಾರ ಪ್ರತಿಕ್ರಿಯಿಸಿಲ್ಲ ಎಂಬ ಆರೋಪಕ್ಕೆ ಸಾಲಿಸಿಟರ್ ಜನರಲ್ ವಾದಿಸಿರುವ ರೀತಿಗೆ ಅಚ್ಚರಿ ವ್ಯಕ್ತಪಡಿಸಿರುವ ಸ್ವಾಮಿ, ಸರಕಾರವು ಕಟ್ಟುಕತೆಯನ್ನು ಕಟ್ಟಿ ಅದನ್ನೇ ಸತ್ಯ ಎಂದು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ನಾನು ಬರೆದಿದ್ದ ಎಲ್ಲಾ ಪತ್ರಗಳಿಗೆ ಪ್ರಧಾನ ಮಂತ್ರಿಯವರು ಉತ್ತರಿಸಿರುವ ಬಗ್ಗೆ ದಾಖಲೆಗಳಿವೆ ಎಂದು ಸಾಲಿಸಿಟರ್ ಜನರಲ್ ಇಂದು ನ್ಯಾಯಾಲಯದಲ್ಲಿ ವಾದಿಸಿದರು. ಆಗ ಮಧ್ಯ ಪ್ರವೇಶಿಸಿದ ನಾನು, ರಾಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧದ ಪತ್ರಗಳಿಗೆ ಸಂಬಂಧಪಟ್ಟಂತೆ ಅವರ ಇಲಾಖೆಯು ನನ್ನ ಜತೆ ಸಂವಹನ ನಡೆಸಿದ್ದು ಒಂದು ಬಾರಿ ಮಾತ್ರ. ಈಗಲೇ ಕ್ರಮಕ್ಕೆ ಮುಂದಾಗುವ ಅಗತ್ಯವಿಲ್ಲ ಎಂಬ ರೀತಿಯ ಉತ್ತರವನ್ನು ನನಗೆ ನೀಡಲಾಗಿತ್ತು ಎಂದು ಹೇಳಿದ್ದೇನೆ ಎಂದು ಸ್ವಾಮಿ ವಿವರಣೆ ನೀಡಿದರು.

ಈ ನಡುವೆ ಬಿಜೆಪಿ ಮತ್ತು ಎಡಪಕ್ಷಗಳು ಕೇಂದ್ರ ಸರಕಾರದ ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದು, ಸುಪ್ರೀಂ ಕೋರ್ಟ್‌ಗೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಪ್ರಧಾನಿಯವರಿಗೆ ಹೇಳಿವೆ. ಅಪೆಕ್ಸ್ ಕೋರ್ಟ್ ಪ್ರಧಾನಿಯವರನ್ನು ಈ ರೀತಿಯಾಗಿ ಪ್ರಶ್ನಿಸಿರುವುದು ಇದೇ ಮೊದಲು, ಇನ್ನಾದರೂ 2ಜಿ ಹಗರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ