ಇಸ್ಲಾಮಾಬಾದ್, ಶುಕ್ರವಾರ, 19 ನವೆಂಬರ್ 2010( 10:30 IST )
ಕಾರ್ಗಿಲ್ ಸಮರದಲ್ಲಿ ತನ್ನ ಪಾತ್ರ ಇಲ್ಲವೇ ಇಲ್ಲ ಎಂದು ತಿಪ್ಪೆ ಸಾರುತ್ತಿದ್ದ ಪಾಕಿಸ್ತಾನ ಕೊನೆಗೂ ಸುಮಾರು 11 ವರ್ಷಗಳ ಬಳಿಕ ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಸೈನಿಕರ ಮಾಹಿತಿಯನ್ನು ಅಧಿಕೃತವಾಗಿ ಹೊರಹಾಕುವ ಮೂಲಕ ತನ್ನ ಪಾತ್ರವನ್ನು ಒಪ್ಪಿಕೊಂಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ವ್ಯಾಪ್ತಿಗೆ ಒಳಪಟ್ಟ ಪರ್ವತ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ನಡೆಸಿದ ಕಾರ್ಯಾಚರಣೆಗೆ ನೀಡಿದ್ದ ಕೋಡ್‌ನೇಮ್‌ಗಳನ್ನೂ ಸಹ ಪಾಕ್ ಸೇನೆ ಬಹಿರಂಗಪಡಿಸಿದೆ.
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ. ಕಾರ್ಗಿಲ್ ಯುದ್ಧದ ವರದಿಯನ್ನು ಬಿಡುಗಡೆ ಮಾಡಿರುವ ಪಾಕ್ ಆರ್ಮಿ ಅದನ್ನು ತನ್ನ ವೆಬ್‌ಸೈಟ್‌ನಲ್ಲಿ ರಹಸ್ಯವಾಗಿ ಪ್ರಕಟಿಸಿದೆ. ಅದಕ್ಕೆ 'ಶುಹಾದಾಸ್ (ಹುತಾತ್ಮ) ಕಾರ್ನರ್' ಎಂಬ ತಲೆಬರಹ ನೀಡಿದೆ. 1999ರಲ್ಲಿ ನಡೆದ ಈ ಸಮರದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಟಾಲಿನ್-ಕಾರ್ಗಿಲ್ ವಲಯದಲ್ಲಿ 453 ಸೈನಿಕರು ಹತರಾಗಿದ್ದರು ಎಂದು ವಿವರಿಸಿದೆ.
ಈ ಪಟ್ಟಿಯಲ್ಲಿ ಕ್ಯಾಪ್ಟನ್ ಕರ್ನಲ್ ಶೇರ್ ಖಾನ್ ಮತ್ತು ಹವಾಲ್ದಾರ್ ಲಾಲಾಕ್ ಜಾನ್ ಇಬ್ಬರನ್ನು ಪಾಕಿಸ್ತಾನದ ಹೀರೋಗಳು ಎಂದು ಹೊಗಳಿ ಪಾಕಿಸ್ತಾನದ ಅತ್ಯುನ್ನತ ಸೇನಾ ಪ್ರಶಸ್ತಿ 'ನಿಶಾನ್ ಎ ಹೈದರ್' ಅನ್ನು ನೀಡಲಾಗಿದೆ. ಈ ಸಮರದಲ್ಲಿ ಪಾಕಿಸ್ತಾನದ ನೂರಾರು ಸೈನಿಕರು ಪಾಲ್ಗೊಂಡಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಎಷ್ಟು ಯೋಧರು ಸಾವನ್ನಪ್ಪಿರಬಹುದು ಎಂಬ ಬಗ್ಗೆ ಗೊಂದಲ ಮೂಡಿತ್ತು. ಆದರೆ ಈ ಬಗ್ಗೆ ಪಾಕಿಸ್ತಾನ ಮಾತ್ರ ಗಾಢ ವಹಿಸಿತ್ತು. ಇದೀಗ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಸಾವನ್ನಪ್ಪಿರುವ ಸೈನಿಕರ ಕುರಿತು ಪಾಕಿಸ್ತಾನ ಅಧಿಕೃತವಾಗಿಯೇ ಬಹಿರಂಗಪಡಿಸಿದಂತಾಗಿದೆ.
ಆದರೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರ್ರಫ್ ಅವರ ಅವಧಿಯಲ್ಲಿ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿ 357 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದು, 665 ಯೋಧರು ಗಾಯಗೊಂಡಿದ್ದರು ಎಂದು 2007ರಲ್ಲಿ ಬಿಡುಗಡೆಯಾದ ಅವರ ಜೀವನ ಚರಿತ್ರೆ ಇನ್ ದಿ ಲೈಫ್ ಆಪ್ ಫೈರ್‌ನಲ್ಲಿ ತಮ್ಮ ಸೈನಿಕರು ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದರು.