ಅಯೋಧ್ಯೆ ವಿವಾದಕ್ಕೆ ಧಾರ್ಮಿಕ ಮುಖಂಡರ ನಡುವಿನ ಮಾತುಕತೆಯ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅಧೋಚ್ಚಾನಂದ್ ದೇವ್, ಉಭಯರು ಒಪ್ಪಿದಲ್ಲಿ ವಿವಾದಿತ ಸ್ಥಳದಲ್ಲಿ ಮಂದಿರ ಮತ್ತು ಮಸೀದಿಯನ್ನು ಕಟ್ಟುವುದಾದರೆ ಉತ್ತಮ ಪರಿಹಾರವೆನಿಸುತ್ತದೆ ಎಂದಿದ್ದಾರೆ.
ಲಕ್ನೋದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಗೋವರ್ಧನ ಪುರಿಯ ಜಗದ್ಗುರು ಶಂಕರಾಚಾರ್ಯರು, ಪ್ರಕರಣವನ್ನು ನ್ಯಾಯಾಲಯದ ಹೊರಗಡೆ ಪರಿಹರಿಸುವುದು ಒಳಿತು ಎಂದು ಸಲಹೆ ಮಾಡಿದರು.
ಅಯೋಧ್ಯೆಯ ವಿವಾದಿತ ಸ್ಥಳದ ಕುರಿತು ಧಾರ್ಮಿಕ ನಾಯಕರು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ನಾನು ವೈಯಕ್ತಿಕವಾಗಿ ಹೇಳುವುದಾದರೆ, ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಮಸೀದಿ ಒಟ್ಟೊಟ್ಟಿಗೆ ಇದ್ದರೆ ಏನೂ ಸಮಸ್ಯೆ ಉದ್ಭವಿಸದು ಎಂದರು.
ಅದೇ ಹೊತ್ತಿಗೆ ಕೆಲವು ಹಿಂದೂ ಸಂಘಟನೆಗಳ ವಿರುದ್ಧ ಅವರು ಕಿಡಿ ಕಾರಿದರು. ಅಯೋಧ್ಯೆ ವಿವಾದವನ್ನು ರಾಜಕೀಯ ಲಾಭಗಳಿಗಾಗಿ ಬಳಸುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದರು.
ಈ ವಿವಾದಕ್ಕೆ ರಾಜಕಾರಣಿಗಳ ಪ್ರವೇಶ ಸಲ್ಲದು. ಅವರಿಂದ ಇದಕ್ಕೆ ಪರಿಹಾರ ನೀಡುವುದು ಸಾಧ್ಯವಿಲ್ಲ. ಇದನ್ನು ಪರಿಹರಿಸುವ ಸಾಮರ್ಥ್ಯ ಹೊಂದಿರುವುದು ಧಾರ್ಮಿಕ ಮುಖಂಡರು ಮಾತ್ರ. ಈ ವಿಚಾರವನ್ನು ನ್ಯಾಯಾಂಗದ ತೀರ್ಮಾನಕ್ಕೆ ಬಿಟ್ಟರೆ ಬಹುಕಾಲ ಹಿಡಿಯಬಹುದು. ಹಾಗಾಗಿ ಮಾತುಕತೆಯೇ ಸಮಸ್ಯೆ ಪರಿಹಾರಕ್ಕೆ ಸೂಕ್ತ ಮಾರ್ಗ ಎಂದು ಶಂಕರಾಚಾರ್ಯ ಹೇಳಿದರು.
ಬುಧವಾರ ಹಿಂದೂಗಳ ಶ್ರದ್ಧಾಕೇಂದ್ರ ಅಯೋಧ್ಯೆಗೆ ಭೇಟಿ ನೀಡಿದ್ದ ಅವರು, ಶ್ರೀರಾಮ ದರ್ಶನ ಮಾಡಿದ್ದರು.
ತಾವು ಇಲ್ಲಿಗೆ ಭೇಟಿ ನೀಡಿರುವ ಉದ್ದೇಶವೇನು ಎಂದು ಅವರಲ್ಲಿ ಪ್ರಶ್ನಿಸಿದಾಗ, ರಾಮದರ್ಶನ ಮುಖ್ಯವಾಗಿತ್ತು. ಜತೆಗೆ ಧಾರ್ಮಿಕ ಮುಖಂಡರನ್ನು ಭೇಟಿಯಾಗಿದ್ದೇನೆ ಎಂದಷ್ಟೇ ತಿಳಿಸಿದರು.