ಅರುಣಾಚಲ ಪ್ರದೇಶದ ತವಾಂಗ್‌ನಿಂದ ಹೊರಟಿದ್ದ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿರುವ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 12 ಮಂದಿ ಸಶಸ್ತ್ರ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
IAF MI-17 ಎಂಬ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ವಾಯು ಸೇನೆಯ 11 ಅಧಿಕಾರಿಗಳು ಮತ್ತು ಓರ್ವ ಮಿಲಿಟರಿ ಅಧಿಕಾರಿ ಚೀನಾ ಗಡಿ ಸಮೀಪದ ಬೊಂದಿರ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನದಲ್ಲಿ ಮರಣ ಹೊಂದಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಕರ್ನಲ್ ರಾಜೇಶ್ ಕಾಲಿಯಾ ಇಟಾನಗರದಲ್ಲಿ ತಿಳಿಸಿದ್ದಾರೆ.
ಸಾವನ್ನಪ್ಪಿದ ಅಧಿಕಾರಿಗಳ ಎಲ್ಲಾ ಕಳೇಬರಗಳನ್ನು ಸೇನೆ ಮತ್ತು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶವಗಳನ್ನು ಗುರುತಿಸುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ.
ತವಾಂಗ್‌ನಲ್ಲಿನ ಹೆಲಿಪ್ಯಾಡ್‌ನಿಂದ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ಗುವಾಹತಿಗೆ ಹೊರಟಿದ್ದ ಈ ಹೆಲಿಕಾಪ್ಟರ್ ಕೆಲವೇ ನಿಮಿಷದಲ್ಲಿ ಆಕಾಶದಲ್ಲಿ ಸ್ಫೋಟಗೊಂಡು ಪತನಗೊಂಡಿತು.
ಅವಘಢಕ್ಕೆ ಕಾರಣಗಳೇನು ಎಂಬುದನ್ನು ತನಿಖೆ ನಡೆಸಲು ಆದೇಶ ನೀಡಲಾಗಿದೆ. ಹೆಲಿಕಾಪ್ಟರ್ ಹಾರಾಟ ನಡೆಸಿದ ಸಂದರ್ಭದಲ್ಲಿ ವಾತಾವರಣ ತಿಳಿಯಾಗಿತ್ತು, ಅಲ್ಲದೆ ಯಾವುದೇ ವಸ್ತು ಹೆಲಿಕಾಪ್ಟರಿಗೆ ಬಡಿದಿರುವ ಸಾಧ್ಯತೆಗಳೂ ಕಡಿಮೆ ಎಂದು ವಾಯು ಪಡೆಯ ಮೂಲಗಳು ಹೇಳಿವೆ.
ಸೇನೆಯ ಸಿಬ್ಬಂದಿಗಳು ದುರ್ಮರಣ ಹೊಂದಿರುವುದಕ್ಕೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ದೊರ್ಜೀ ಖಾಂಡು ಸಂತಾಪ ವ್ಯಕ್ತಪಡಿಸಿದ್ದಾರೆ.
ಹೆಲಿಕಾಪ್ಟರ್ ಪತನಗೊಳ್ಳುವ ಮೊದಲು ಸ್ಫೋಟ ಸಂಭವಿಸಿತ್ತು. ಈ ಹೊತ್ತಿನಲ್ಲಿ ಹೆಲಿಕಾಪ್ಟರ್ ನೆಲದಿಂದ 14,000 ಅಡಿ ಎತ್ತರದಲ್ಲಿತ್ತು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.