ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ: ರಾಮದೇವ್ (Ram temple | Ayodhya verdict | Yoga guru Ramdev | Ashok Singhal)
Bookmark and Share Feedback Print
 
ಅಯೋಧ್ಯೆ ವಿವಾದದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಸಮತೋಲನ ಕಾಯ್ದುಕೊಳ್ಳುವ ನಿಲುವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿರುವ ಯೋಗಗುರು ರಾಮದೇವ್, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗ ಬೇಕು ಎಂಬ ನಿಟ್ಟಿನಲ್ಲಿ ಬೆಂಬಲ ಸೂಚಿಸಲು ಈ ಹಿಂದೆ ಸಾಕಷ್ಟು ಮುಸ್ಲಿಮರ ನಿಯೋಗವು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ ಎಂದೂ ಅವರು ತಿಳಿಸಿದ್ದಾರೆ.

ಮುಸ್ಲಿಂ ಧಾರ್ಮಿಕ ನಾಯಕರ ಜತೆ ನಾನು ಸಂಪರ್ಕದಲ್ಲಿದ್ದೇನೆ. ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪರ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿಕೊಂಡರು.

ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅವಿರತ ಶ್ರಮಿಸಿದ, ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಪ್ರಮುಖ ವಾದಿಗಳಾಗಿರುವ ಹನುಮಾನ್‌ಗಾರ್ಹಿಯ ಮಹಂತಾ ಜ್ಞಾನ್ ದಾಸ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿದ ನಂತರ ರಾಮದೇವ್ ಮಾತನಾಡುತ್ತಿದ್ದರು.

ಇದೇ ಹೊತ್ತಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಹಗರಣಗಳ ಬಗ್ಗೆ ರಾಮದೇವ್ ಕಿಡಿ ಕಾರಿದ್ದಾರೆ. ಇದನ್ನು ಮಟ್ಟ ಹಾಕಲು ಪ್ರಧಾನ ಮಂತ್ರಿಯವರು ಕಠಿಣ ಕ್ರಮಗಳಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪ್ರಾಮಾಣಿಕ ವ್ಯಕ್ತಿ. ಅದಕ್ಕಾಗಿ ಅವರನ್ನು ನಾವೆಲ್ಲರೂ ಗೌರವಿಸುತ್ತೇವೆ. ಅವರು ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಲ್ಲಿ ಅವರನ್ನು ನಾವು ಮಾದರಿ ಪ್ರಧಾನ ಮಂತ್ರಿ ಎಂದು ಕರೆಯಬಹುದು. ಇದಕ್ಕೆ ತಪ್ಪಿದಲ್ಲಿ ಅವರನ್ನು ದೇಶ ಯಾವತ್ತೂ ಕ್ಷಮಿಸದು ಎಂದು ಪತ್ರಕರ್ತರಲ್ಲಿ ತಿಳಿಸಿದರು.

ತನ್ನಲ್ಲೂ ಓರ್ವ ಸಚಿವರು ಲಂಚ ಕೇಳಿದ್ದರು ಎಂಬುದನ್ನು ಇದೇ ಸಂದರ್ಭದಲ್ಲಿ ರಾಮದೇವ್ ಬಹಿರಂಗಪಡಿಸಿದರು.

ಎರಡು ವರ್ಷಗಳ ಹಿಂದೆ ಜಮೀನಿನ ವಿಚಾರವೊಂದರಲ್ಲಿ ಅನುಮತಿಗಾಗಿ ಉತ್ತರಾಖಂಡ ಸರಕಾರದ ಸಚಿವರೊಬ್ಬರು ಎರಡು ಕೋಟಿ ರೂಪಾಯಿಗಳ ಲಂಚ ಕೇಳಿದ್ದರು. ಈ ವಿಚಾರವನ್ನು ನಾನು ಆಗಿನ ಮುಖ್ಯಮಂತ್ರಿಯವರ ಜತೆ ಪ್ರಸ್ತಾಪಿಸಿದ್ದೆ. ಆದರೆ ನನ್ನ ಮಾತುಗಳನ್ನು ಮುಖ್ಯಮಂತ್ರಿ ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಸಚಿವರ ಹೆಸರು ಹೇಳದೆ ತಿಳಿಸಿದರು.

ಅಯೋಧ್ಯೆಯ ತಾತ್ಕಾಲಿಕ ರಾಮಮಂದಿರಕ್ಕೆ ಭೇಟಿ ನೀಡಿ ರಾಮದರ್ಶನ ಪಡೆದ ರಾಮದೇವ್, ನಂತರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಜತೆ ಮಾತುಕತೆ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ