ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಪ್ರಧಾನಿಯಾಗ್ತಿದ್ರೆ ಹಗರಣ ನಡೆಯುತ್ತಿರಲಿಲ್ಲ: ಮೋದಿ (2G scam | Gujarat | Narendra Modi | Prime Minister)
Bookmark and Share Feedback Print
 
ಮನಮೋಹನ್ ಸಿಂಗ್‌ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆಯುತ್ತಿರುವುದನ್ನು ಕಂಡು ಛೂ ಬಾಣ ಬಿಟ್ಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನಾನು ಪ್ರಧಾನ ಮಂತ್ರಿಯಾಗಿರುತ್ತಿದ್ದರೆ 2ಜಿ ತರಂಗಾಂತರ ಹಗರಣ ನಡೆಯುತ್ತಿರಲಿಲ್ಲ ಎಂದಿದ್ದಾರೆ.

ತಾವು ದೇಶದ ಪ್ರಧಾನ ಮಂತ್ರಿಯಾಗಿದ್ದಿದ್ದರೆ ಹಗರಣಗಳನ್ನು ಹೇಗೆ ನಿಭಾಯಿಸುತ್ತಿದ್ದಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ಅಷ್ಟಕ್ಕೂ ಹಗರಣಗಳು ಯಾಕೆ ನಡೆಯಬೇಕು ಎಂದು ಮರು ಪ್ರಶ್ನೆ ಹಾಕಿದರು.

'ಇಂಡಿಯಾ ಟುಡೇ' ಸಮೂಹವು ಆಯೋಜಿಸಿದ್ದ 'ಸ್ಟೇಟ್ ಆಫ್ ಸ್ಟೇಟ್ಸ್ ಇನ್ ಇಂಡಿಯಾ' ವಿಚಾರಗೋಷ್ಠಿಯಲ್ಲಿ ಅವರಿಗೆ ಇಂತಹ ಹತ್ತು-ಹಲವು ಪ್ರಶ್ನೆಗಳು ತೇಲಿ ಬಂದವು.

ಕೇಂದ್ರ ಸರಕಾರದ ನೀತಿಗಳಿಂದಾಗಿ ಭಾರತದ ಸಂಯುಕ್ತ ವ್ಯವಸ್ಥೆಯು ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿದೆ ಎಂದೂ ಮೋದಿ ಈ ಸಂದರ್ಭದಲ್ಲಿ ಹೇಳಿದರು. ಇದಕ್ಕೆ ದನಿಗೂಡಿಸಿದ್ದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್. ಎರಡೂ ರಾಜ್ಯಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರವು ಅಡ್ಡಗಾಲು ಹಾಕುತ್ತಿದೆ ಎಂದು ನಾಯಕರು ಆರೋಪಿಸಿದರು.

ಕೇಂದ್ರದ ದೂರದೃಷ್ಟಿ ಕೊರತೆಯನ್ನು ಎತ್ತಿ ತೋರಿಸಿದ ಮೋದಿ, ರಾಜ್ಯಗಳು ಏಳ್ಗೆಗಾಗಿ ಎಷ್ಟೇ ಪ್ರಯತ್ನ ಪಟ್ಟರೂ ಗಂಭೀರ ಸಮಸ್ಯೆಗಳನ್ನು, ಎಡರು ತೊಡರುಗಳನ್ನು ಎದುರಿಸುತ್ತಿವೆ ಎಂದರು.

ಕೇಂದ್ರವು ತನ್ನ ನೌಕರರ ವೇತನವನ್ನು ಭಾರೀ ಮಟ್ಟದಲ್ಲಿ ಹೆಚ್ಚಿಸುತ್ತಿದೆ. ಹಾಗಾಗಿ ತಮ್ಮ ನೌಕರರನ್ನು ಸಂತೃಪ್ತರನ್ನಾಗಿ ಮಾಡಲು ರಾಜ್ಯಗಳು ಕೂಡ ಅದೇ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆಯಲ್ಲಿವೆ. ಆದರೆ ಇಲ್ಲಿ ವಾಸ್ತವಾಂಶವನ್ನು ಗಣನೆಗೆ ತೆಗೆದುಕೊಂಡರೆ, ಕೇಂದ್ರದ ಆದಾಯ ಹೆಚ್ಚು, ರಾಜ್ಯದ ಪರಿಸ್ಥಿತಿ ದಯನೀಯವಾಗಿದೆ ಎಂದು ವಿವರಣೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ