ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣದಲ್ಲಿ ಸುಮ್ಮನೆ ಕೂತಿಲ್ಲ: ಸುಪ್ರೀಂ ಪ್ರಧಾನಿ ಉತ್ತರ
(Manmohan Singh | Supreme Court | 2G scam | Subramanium Swamy)
2ಜಿ ಹಗರಣದಲ್ಲಿ ಸುಮ್ಮನೆ ಕೂತಿಲ್ಲ: ಸುಪ್ರೀಂ ಪ್ರಧಾನಿ ಉತ್ತರ
ನವದೆಹಲಿ, ಶನಿವಾರ, 20 ನವೆಂಬರ್ 2010( 15:05 IST )
2ಜಿ ಹಗರಣಕ್ಕೆ ಸಂಬಂಧಪಟ್ಟಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿತ್ ಸಲ್ಲಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಈ ಕುರಿತು ತಾನು ಸುಮ್ಮನೆ ಕುಳಿತಿಲ್ಲ ಎಂದು ಎಂದಿದ್ದಾರೆ.
2ಜಿ ಹಗರಣ ಪ್ರಕರಣದಲ್ಲಿ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಮಾಡಿರುವ ಮನವಿಗೆ ತಾನು ಸ್ಪಂದಿಸಿಲ್ಲ ಎಂಬ ಆರೋಪವನ್ನು ಈ ಅಫಿಡವಿತ್‌ನಲ್ಲಿ ಪ್ರಧಾನಿ ತಳ್ಳಿ ಹಾಕಿದ್ದಾರೆ.
11 ಪುಟಗಳ ಈ ಅಫಿಡವಿತ್‌ನ್ನು ಪ್ರಧಾನ ಮಂತ್ರಿಯವರ ಕಚೇರಿಯ ನಿರ್ದೇಶಕಿ ವಿ. ವಿದ್ಯಾವತಿಯವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದು, ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯಂ ಸ್ವಾಮಿಯವರು ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಕ ಕುರಿತು ಪ್ರಧಾನ ಮಂತ್ರಿಯವರ ಕಚೇರಿಯು ಕ್ರಮ ಕೈಗೊಳ್ಳದೆ ಮೌನವಾಗಿಲ್ಲ ಎಂದು ಹೇಳಲಾಗಿದೆ.
ಸ್ವಾಮಿಯವರು ಪ್ರಧಾನಿಗೆ ಬರೆದಿರುವ ಎಲ್ಲಾ ಪತ್ರಗಳನ್ನು ಪ್ರಧಾನ ಮಂತ್ರಿಯವರ ಕಚೇರಿಯು ಗಂಭೀರ ಪರಿಗಣನೆಗೆ ತೆಗೆದುಕೊಂಡಿದೆ. ಅವರ ಮೊದಲ ಪತ್ರ 2008ರ ನವೆಂಬರ್ 29ರಿಂದ 2010ರ ಅಕ್ಟೋಬರ್ ತಿಂಗಳವರೆಗಿನ ಕೊನೆಯ ಪತ್ರದವರೆಗೆ ಎಲ್ಲವನ್ನೂ ಕಚೇರಿಯು ಪರಿಶೀಲನೆ ನಡೆಸಿದೆ ಎಂದು ಪ್ರಧಾನಿಯವರ ಪರವಾಗಿ ಸಲ್ಲಿಸಿರುವ ಅಫಿಡವಿತ್‌ನಲ್ಲಿ ತಿಳಿಸಲಾಗಿದೆ.
ರಾಜಾ ಅವರು ಅವ್ಯವಹಾರ ನಡೆಸಿದ್ದಾರೆಂದು ಸ್ವಾಮಿಯವರು ಬರೆದಿರುವ ಪತ್ರಕ್ಕೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿಯವರ ಕಚೇರಿಯು 2009ರ ಮೇ ತಿಂಗಳಲ್ಲಿ ಕಾನೂನು ಸಚಿವಾಲಯದ ಅಭಿಪ್ರಾಯ ಕೇಳಿತ್ತು. ರಾಜಾ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಕ್ರಮಕ್ಕೊಳಪಡಿಸಲು ಸಾಧ್ಯವೇ ಎಂದು ಸಲಹೆ ಪಡೆದಿತ್ತು ಎಂದು ಅಫಿಡವಿತ್ ತಿಳಿಸಿದೆ.
ಇದಕ್ಕೆ 2010ರ ಫೆಬ್ರವರಿಯಲ್ಲಿ ಕಾನೂನು ಸಚಿವಾಲಯವು ಉತ್ತರಿಸಿತ್ತು. ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿರುವುದರಿಂದ ಪ್ರಧಾನ ಮಂತ್ರಿಯವರು ಈ ಕುರಿತು ಯಾವುದೇ ಕ್ರಮಕ್ಕೆ ಮುಂದಾಗುವ ಅಗತ್ಯವಿಲ್ಲ ಎಂದಿತ್ತು.
2ಜಿ ಹಗರಣಕ್ಕೆ ಸಂಬಂಧಪಟ್ಟಂತೆ ಎರಡು ವರ್ಷಗಳ ಹಿಂದೆಯೇ ಸುಬ್ರಮಣ್ಯಂ ಸ್ವಾಮಿಯವರು ಪ್ರಧಾನಿಗೆ ಪತ್ರ ಬರೆದು, ರಾಜಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು. ಆದರೆ ಇದಕ್ಕೆ ಬರೋಬ್ಬರಿ 16 ತಿಂಗಳ ನಂತರ ಪ್ರಧಾನಿಯವರ ಕಚೇರಿ ಪ್ರತಿಕ್ರಿಯೆ ನೀಡಿತ್ತು. ಹಗರಣದ ಕುರಿತು ಪ್ರಧಾನಿಯವರು ಯಾಕೆ ಮೌನವಾಗಿದ್ದರು ಎಂದು ಸುಪ್ರೀಂ ಕೆಲ ದಿನಗಳ ಹಿಂದಷ್ಟೇ ಪ್ರಶ್ನಿಸಿತ್ತು.
ಅಲ್ಲದೆ ಈ ಕುರಿತು ಅಫಿಡವಿತ್ ಸಲ್ಲಿಸುವಂತೆ ಪ್ರಧಾನಿಗೆ ಸೂಚಿಸಿತ್ತು. ಅದರಂತೆ ಇಂದು ಪ್ರಧಾನಿಯವರ ಪರವಾಗಿ ಪಿಎಂಒ ನಿರ್ದೇಶಕಿ ಅಫಿಡವಿತ್ ಸಲ್ಲಿಸಿ, ಪ್ರಧಾನಿ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.