ಭೂ ಹಗರಣಗಳಲ್ಲಿ ಸಿಲುಕಿ ನಲುಗುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜೀವದಾನ ಪಡೆಯಲಿದ್ದಾರೆಯೇ? ಬಿಜೆಪಿ ಮತ್ತು ಯಡಿಯೂರಪ್ಪನವರ ವರ್ತನೆಗಳನ್ನು ಗಮನಿಸುವಾಗ ಇಂತಹ ಸಂಶಯ ಬಾರದೇ ಇರದು. ಈ ಕುರಿತು ಭಾನುವಾರ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಬಿಜೆಪಿ ಹೈಕಮಾಂಡ್ ಈಗಾಗಲೇ ಯಡಿಯೂರಪ್ಪ ಮುಖ್ಯಮಂತ್ರಿ ಪದವಿಯ ಕುರಿತು ಚರ್ಚಿಸಿದೆ. ಈ ಸಂದರ್ಭದಲ್ಲಿ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಬಣಗಳ ನಡುವೆ ತಿಕ್ಕಾಟಗಳೂ ನಡೆದಿವೆ. ಆದರೂ ರಾಜ್ಯ ಬಿಜೆಪಿ ಸಮರ್ಥ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವುದರಿಂದ ಮುಖ್ಯಮಂತ್ರಿ ಬದಲಾವಣೆಗೆ ಒತ್ತು ನೀಡಲು ಹಿಂದೆ ಮುಂದೆ ಯೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಲೆಹರ್ ಸಿಂಗ್, ಯಡಿಯೂರಪ್ಪ, ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ, ಡಿ.ವಿ. ಸದಾನಂದ ಗೌಡ ಮುಂತಾದವರು ಭಾಗವಹಿಸಿದ್ದರು.
ಅರುಣ್ ಜೇಟ್ಲಿಯವರೊಂದಿಗೆ ಏಕಾಂಗಿಯಾಗಿ ಮಾತುಕತೆ ನಡೆಸಿದ ಬಳಿಕ ಬಿಜೆಪಿಯ ಎರಡೂ ಬಣಗಳ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಗಡ್ಕರಿಯವರು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಪರ ವಿರೋಧ ವಾದಗಳು ನಡೆದಿವೆ. ಕೆಲವರು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದರೆ, ಬದಲಾವಣೆ ಮಾಡಿದರೆ ಪಕ್ಷ ಖಂಡಿತಾ ನೆಲ ಕಚ್ಚಲಿದೆ ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಇನ್ನು ಕೆಲವು ಮೂಲಗಳ ಪ್ರಕಾರ ಪಕ್ಷದ ಹೈಕಮಾಂಡ್ ಹಗರಣಗಳು ಮತ್ತು ಮುಖ್ಯಮಂತ್ರಿಯವರ ವರ್ತನೆ ಸಂಬಂಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಜವಾಬ್ದಾರಿಯುತವಾಗಿರಬೇಕಾದ ಹುದ್ದೆಯಲ್ಲಿರುವವರು ಸ್ವಜನ ಪಕ್ಷಪಾತದಲ್ಲಿ ತೊಡಗಿಸಿಕೊಂಡು, ಅಕ್ರಮದಲ್ಲಿ ಮುಳುಗಿರುವುದು ಶಿಸ್ತಿನ ಪಕ್ಷಕ್ಕೆ ಮುಜುಗರವನ್ನು ತಂದಿದೆ. ಇದನ್ನು ತಿದ್ದಿಕೊಳ್ಳುವಂತೆ ಮತ್ತೊಂದು ಅವಕಾಶವನ್ನು ಯಡಿಯೂರಪ್ಪನವರಿಗೆ ನೀಡಲಾಗಿದೆ.
ಆದರೂ ಈ ಕುರಿತು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವುದು ವರಿಷ್ಠ ಎಲ್.ಕೆ. ಅಡ್ವಾಣಿ. ಅವರು ಭಾನುವಾರ ದೆಹಲಿಗೆ ಆಗಮಿಸಲಿದ್ದು, ಯಡಿಯೂರಪ್ಪ ತಲೆದಂಡ ಪಡೆಯುವ ಅಥವಾ ಮುಂದುವರಿಸುವ ಕುರಿತು ತೀರ್ಮಾನಿಸಲಿದ್ದಾರೆ.
ನಾನೇ ಮುಖ್ಯಮಂತ್ರಿ... ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಒಳಗಡೆ ಎದ್ದಿರುವ ಪ್ರಶ್ನೆಗಳಿಗೆ ತಿರುಗೇಟು ನೀಡಿರುವ ಯಡಿಯೂರಪ್ಪ, ಮುಂದಿನ ಎರಡೂವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ. ಹಾಗೆ ಬೇರೆ ಯಾರಿಗಾದರೂ ಮುಖ್ಯಮಂತ್ರಿಯಾಗಬೇಕೆಂದು ಆಸೆಯಿದ್ದರೆ, ಅವರು ಚುನಾವಣೆಯನ್ನು ಎದುರಿಸಲಿ ಎಂದಿದ್ದಾರೆ.
ಯಾರು ಬೇಕಾದರೂ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕಣ್ಣಿಡಬಹುದು. ಆದರೆ ಈಗ ಪಕ್ಷ ಅಧಿಕಾರಕ್ಕೆ ಬಂದಿರುವುದು ನನ್ನ ನಾಯಕತ್ವದ ಅಡಿಯಲ್ಲಿ. ಮುಂದಿನ ಚುನಾವಣೆಯನ್ನೂ ಪಕ್ಷ ನನ್ನದೇ ನಾಯಕತ್ವದಲ್ಲಿ ಎದುರಿಸುತ್ತದೆ. ಹಾಗೊಂದು ವೇಳೆ ಪಕ್ಷ ನಿರ್ಧರಿಸಿದಲ್ಲಿ ಬೇರೆ ಯಾರಾದರೂ ಮುಖ್ಯಮಂತ್ರಿಯಾಗಬಹುದು. ಅದಕ್ಕೆ ನನ್ನಿಂದ ಯಾವುದೇ ಆಕ್ಷೇಪವಿಲ್ಲ ಎಂದರು.