ಮಾವೋವಾದಿಗಳು ತಮ್ಮ ಅಟ್ಟಹಾಸವನ್ನು ಮತ್ತೆ ಮುಂದುವರಿಸಿದ್ದಾರೆ. ಬಿಹಾರದ ಔರಂಗಬಾಂದ್ ಜಿಲ್ಲೆಯ ಪಾಚೊಖಾರ್ ಗ್ರಾಮದಲ್ಲಿ ನಕ್ಸಲ್ ಹುದುಗಿಸಿಟ್ಟಿದ್ದ ಬಾಂಬ್‌ವೊಂದು ಸ್ಫೋಟಿಸಿದ ಪರಿಣಾಮ ಸಂಭವಿಸಿದ ಅನಾಹುತದಲ್ಲಿ ಐವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಸಾವೀಗೀಡಾಗಿದ್ದಾರೆ.
ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದಲ್ಲಿ ಶನಿವಾರ ಆರನೇ ಹಂತದ ಚುನಾವಣೆ ನಡೆದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಶಾಂತಿಯುತವಾಗಿ ನಡೆಯುತ್ತಿದ್ದ ಚುನಾವಣೆಯನ್ನು ಹದೆಗೆಡಿಸುವ ಉದ್ದೇಶದೊಂದಿಗೆ ಬಾಂಬ್ ಇರಿಸಲಾಗಿತ್ತು. ಆದರೆ ಭಾನುವಾರ ಈ ಅನಾಹುತಕ್ಕೆ ಏಳು ಮಂದಿ ಬಲಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.