ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಾನ. ಇಲ್ಲಿ ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ಅವಕಾಶ ನೀಡುವುದಿಲ್ಲ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆಯಲ್ಲೇ ರಾಮ ಹುಟ್ಟಿದ್ದು ಎನ್ನುವುದು ನಮ್ಮ ನಂಬಿಕೆ. ಹಾಗಾಗಿ ಯಾವುದೇ ಮಸೀದಿಯನ್ನು ಅಲ್ಲಿ ನಿರ್ಮಿಸಲು ಅವಕಾಶ ನೀಡುವುದಿಲ್ಲ. ಆ ಪ್ರಶ್ನೆಯೇ ನಮ್ಮ ಮುಂದಿಲ್ಲ ಎಂದು ಸಾಧುಗಳ ನಿಯೋಗ ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ತೊಗಾಡಿಯಾ ಹೇಳಿದರು.
ಕೇಂದ್ರ ಸರಕಾರವು ವಶಪಡಿಸಿಕೊಂಡಿರುವ 67 ಎಕರೆ ಪ್ರದೇಶದಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಲಾಗುತ್ತದೆ. ಈ ಬಗ್ಗೆ ಯಾವುದೇ ಸಂಶಯ ಬೇಕಾಗಿಲ್ಲ ಎಂದು ಭರವಸೆ ನೀಡಿದ ಅವರು, ಸಂಘಟನೆಯು ಶೀಘ್ರದಲ್ಲೇ 'ಹನುಮಂತ್ ಶಕ್ತಿ ಯಾತ್ರೆ'ಯನ್ನು ಆರಂಭಿಸಲಿದೆ ಎಂದು ಪ್ರಕಟಿಸಿದರು.
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ಬೆಂಬಲ ಪಡೆದುಕೊಳ್ಳುವ ಸಲುವಾಗಿ ಈ ಯಾತ್ರೆ ನಡೆಯುತ್ತದೆ. ದೇಶದಾದ್ಯಂತದ ನಗರಗಳು ಮತ್ತು ಹಳ್ಳಿಗಳಲ್ಲಿ ಈ ಯಾತ್ರೆ ಸಾಗುತ್ತದೆ. ಶೀಘ್ರದಲ್ಲೇ ಇದರ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದರು.
ಕೇಸರಿ ಭಯೋತ್ಪಾದನೆ ಆರೋಪ ಮಾಡಿದ್ದ ಕೇಂದ್ರ ಗೃಹಸಚಿವ ಪಿ. ಚಿದಂಬರಂ ವಿರುದ್ಧ ಇದೇ ಸಂದರ್ಭದಲ್ಲಿ ತೊಗಾಡಿಯಾ ಹರಿ ಹಾಯ್ದಿದ್ದಾರೆ. ಅವರು ಪ್ರತಿ ಕೇಸರಿ ಬಟ್ಟೆಯ ಹಿಂದೆ ಬಾಂಬೊಂದನ್ನು ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಾಂಸ್ಕೃತಿಕ ಮತ್ತು ಧಾರ್ಮಿಕ ಭಿನ್ನತೆಗಳ ಕಾರಣಗಳಿಂದಾಗಿ ಹಿಂದೂಗಳು ಮತ್ತು ಮುಸಲ್ಮಾನರು ಜತೆಯಾಗಿ ಬಾಳುವುದು ಸಾಧ್ಯವಿಲ್ಲ ಎಂಬ ಮೊಹಮ್ಮದ್ ಆಲಿ ಜಿನ್ನಾರ ದ್ವಿರಾಷ್ಟ್ರ ತತ್ವದ ಕುರಿತ ತೊಗಾಡಿಯಾ ಅಭಿಪ್ರಾಯವನ್ನು ಬೆಂಬಲಿಸಿರುವ ವಿಎಚ್‌ಪಿ ನಾಯಕ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತಾ ನೃತ್ಯ ಗೋಪಾಲ ದಾಸ್, 'ಇದು ಕೂಡ ಜಿನ್ನಾ ಹೇಳಿದಂತೆಯೇ. ಇಲ್ಲಿ ಮಸೀದಿ ಮತ್ತು ಮಂದಿರ ಜತೆಯಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ ನಾವು ರಾಮಮಂದಿರದ ಹತ್ತಿರ ಮಸೀದಿ ಕಟ್ಟಲು ಬಿಡುವುದಿಲ್ಲ' ಎಂದರು.
ಅದೇ ಹೊತ್ತಿಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಬೇಕೆಂಬ ಬೇಡಿಕೆಯನ್ನು ದೇಶದ ಮುಸ್ಲಿಮರು ಕೈ ಬಿಡಬೇಕು ಎಂದು ಮನವಿ ಮಾಡಿರುವ ಗೋಪಾಲ ದಾಸ್, ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಕೊಡಬೇಕು ಎಂದು ಹೇಳಿದ್ದಾರೆ.