ಸಂಯುಕ್ತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟ ಬಿಹಾರದಲ್ಲಿ ಮತ್ತೆ ಬಹುಮತ ಪಡೆಯಲಿದೆಯೇ? ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾಗಲಿದ್ದಾರೆಯೇ? ಬಹುತೇಕ ಸಮೀಕ್ಷೆಗಳು ಹೌದು ಎನ್ನುತ್ತಿವೆ. ಇವೆಲ್ಲವೂ ನಾಡಿದ್ದು ಅಂದರೆ ನವೆಂಬರ್ 24ರಂದು ಖಚಿತವಾಗಲಿದೆ. ಅಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.
'ಸಿಎನ್ಎನ್-ಐಬಿನ್-ದಿ ವೀಕ್' ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಎನ್‌ಡಿಎ ಬಿಹಾರದಲ್ಲಿ ಬಹುತೇಕ ಸ್ಥಾನಗಳನ್ನು ಬಾಚಿಕೊಳ್ಳಲಿವೆ. ಎರಡು ಪಕ್ಷಗಳ ಮೈತ್ರಿಕೂಟವು 185-201 ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಈ ಸಮೀಕ್ಷೆ ಹೇಳಿದೆ.
'ಸ್ಟಾರ್ ಎಸಿ ನೀಲ್ಸನ್' ಸಮೀಕ್ಷೆಯ ಪ್ರಕಾರ ನಿತೀಶ್ ಕುಮಾರ್ ನೇತೃತ್ವದ ಪ್ರಸಕ್ತ ಸರಕಾರವು 150 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. 'ಸಿವೋಟರ್' ಪ್ರಕಾರ 142-154 ಸೀಟುಗಳನ್ನು ಗೆಲ್ಲಲಿದೆ.
243 ಸದಸ್ಯ ಬಲವನ್ನು ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಬಹುಮತ ಪಡೆಯಬೇಕೆಂದರೆ 122 ಸ್ಥಾನಗಳ ಅಗತ್ಯವಿದೆ. ಆದರೆ ಜೆಡಿಯು-ಬಿಜೆಪಿ ಮೈತ್ರಿಕೂಟವು 185ರಿಂದ 201 ಸೀಟುಗಳನ್ನು ಗೆಲ್ಲಲಿದೆ ಎಂದು ಸಿಎನ್ಎನ್-ಐಬಿಎನ್ - ದಿ ವೀಕ್ ಸಮೀಕ್ಷೆ ಹೇಳಿದೆ.
ಬಿಹಾರದಲ್ಲಿ ಸರಿಸುಮಾರು ಶೇ.46 ಮತಗಳ ಪಾಲನ್ನು ಆಡಳಿತ ಮೈತ್ರಿಕೂಟವು ಪಡೆಯಲಿದೆ. ನಂತರದ ಸ್ಥಾನದಲ್ಲಿ ರಾಷ್ಟ್ರೀಯ ಜನತಾದಳ (ಲಾಲೂ ಪ್ರಸಾದ್) - ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್) ಮೈತ್ರಿಕೂಟವು ಶೇ.27ರ ಪಾಲು ಪಡೆಯಲಿದೆ. ಇಲ್ಲಿ ಕಾಂಗ್ರೆಸ್ ಪಾಲು ಕೇವಲ ಶೇ.9 ಮಾತ್ರ ಎಂದು ಸಮೀಕ್ಷೆ ಹೇಳಿದೆ.
ಲಾಲೂ-ಪಾಸ್ವಾನ್ ಒಟ್ಟಾರೆ 22ರಿಂದ 32 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಬಲ್ಲರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಘಟಾನುಘಟಿಗಳು ಪ್ರಚಾರ ಮಾಡಿದ್ದರೂ ಕಾಂಗ್ರೆಸ್ ಸೀಟು 6ರಿಂದ 12ರ ನಡುವೆಯೇ ಉಳಿಯುತ್ತದೆ. ಇನ್ನು ಪಕ್ಷೇತರರು, ಎಡಪಕ್ಷಗಳು ಮತ್ತು ಇತರರು 9ರಿಂದ 19 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಸ್ಟಾರ್ ಎಸಿ ನೀಲ್ಸನ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಆರ್‌ಜೆಡಿ-ಎಲ್‌ಜೆಪಿಗಳು ಒಟ್ಟಾರೆ 57 ಸ್ಥಾನಗಳನ್ನು ಗೆಲ್ಲಲಿವೆ. ಕಾಂಗ್ರೆಸ್ ಪಾಲ 15 ಆಗಿದ್ದರೆ, ಇತರರು 21 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಲಿದ್ದಾರೆ.
ಸಿವೋಟರ್ ಪ್ರಕಾರ ಆರ್‌ಜೆಡಿ-ಎಲ್‌ಜೆಪಿ ಮೈತ್ರಿಕೂಟವು 59ರಿಂದ 71ರ ನಡುವೆ ತೂಗಲಿದೆ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ 12ರಿಂದ 18 ಸೀಟುಗಳನ್ನಷ್ಟೇ ಪಡೆಯಲಿದೆ.
ಈ ಮೂರು ಸಮೀಕ್ಷೆಗಳು ಹೇಳಿರುವುದು ಎಷ್ಟು ಸತ್ಯ ಎನ್ನುವುದು ನವೆಂಬರ್ 24ರ ಬುಧವಾರ ಮಧ್ಯಾಹ್ನದ ಹೊತ್ತಿಗೆ ಬಹಿರಂಗವಾಗಲಿದೆ.