ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟರ ನೇಮಕ; ಕೇಂದ್ರಕ್ಕೆ ಸುಪ್ರೀಂನಿಂದ ಮತ್ತೆ ತರಾಟೆ? (PJ Thomas | CVC | Supreme Court | UPA govt)
Bookmark and Share Feedback Print
 
2ಜಿ ಹಗರಣದ ಆರೋಪ ಹೊತ್ತಿದ್ದ ಪಿ.ಜೆ. ಥಾಮಸ್ ಅವರನ್ನು ಕೇಂದ್ರೀಯ ಜಾಗೃತ ದಳದ ಆಯುಕ್ತರನ್ನಾಗಿ ನೇಮಕ ಮಾಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ಕೇಂದ್ರ ಮತ್ತೊಮ್ಮೆ ಮುಜುಗರಕ್ಕೊಳಗಾಗಿದೆ.

ಥಾಮಸ್ ವಿರುದ್ಧ ಕ್ರಿಮಿನಲ್ ಸೇರಿದಂತೆ ಸಾಕಷ್ಟು ಆರೋಪಗಳಿರುವಾಗ ಅವರು ಸಿವಿಸಿ ಆಯುಕ್ತರಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆರೋಪಗಳನ್ನು ಎದುರಿಸುತ್ತಿರುವ ಮತ್ತು ಆರೋಪ ಪಟ್ಟಿಯಲ್ಲಿ ಹೆಸರು ದಾಖಲಿಸಿಕೊಂಡಿರುವ ವ್ಯಕ್ತಿಯೊಬ್ಬ ತನಿಖಾ ದಳವೊಂದರ ಮುಖ್ಯಸ್ಥನಾಗಿ ಹೇಗೆ ಕೆಲ ಮಾಡುತ್ತಾನೆ ಎಂದು ಪೀಠವು ಪ್ರಶ್ನಿಸಿದೆ.

ಇದೇ ವರ್ಷದ ಸೆಪ್ಟೆಂಬರ್ 6ರಂದು ಥಾಮಸ್ ಅವರನ್ನು ಜಾಗೃತ ದಳದ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದನ್ನು ಬಿಜೆಪಿ ಸೇರಿದಂತೆ ಕೆಲವು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು.

2ಜಿ ತರಂಗಾಂತರ ಹಗರಣವನ್ನು 'ಮಹಾ ಬೋಫೋರ್ಸ್' ಎಂದು ಬಿಜೆಪಿ ಬಣ್ಣಿಸಿತ್ತು. ದೂರಸಂಪರ್ಕ ಇಲಾಖೆಯ ಮಾಜಿ ಕಾರ್ಯದರ್ಶಿ ಥಾಮಸ್ ಹಲವು ಆರೋಪಗಳನ್ನು ಹೊತ್ತಿದ್ದಾರೆ. ಅಲ್ಲಿನ ಹಗರಣಗಳನ್ನು ಮುಚ್ಚಿ ಹಾಕಲು ಅವರನ್ನು ಸಿವಿಸಿ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತಿದೆ ಎಂದು ಆರೋಪಿಸಿತ್ತು.

ಬಿಜೆಪಿಯ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿದ್ದ ಯುಪಿಎ ಸರಕಾರವು, ಥಾಮಸ್ ಅವರನ್ನೇ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಎಲ್ಲಾ ನಾಯಕರು ಕಾರ್ಯಕ್ರಮದಿಂದ ಹೊರಗುಳಿದಿದ್ದರು. ಅಲ್ಲದೆ ಸುಷ್ಮಾ ಸ್ವರಾಜ್ ಈ ಸಂಬಂಧ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ದೂರನ್ನೂ ನೀಡಿದ್ದರು.

ಥಾಮಸ್ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಿರುವು ಕ್ರಮವನ್ನು ಸರಕಾರ ಸಮರ್ಥಿಸಿ, ಸರಕಾರದ ಪರ ಅಟಾರ್ನಿ ಜನರಲ್ ಜಿ.ಇ. ವಹನ್ವತಿಯವರು ಮುಚ್ಚಿದ ಲಕೋಟೆಯಲ್ಲಿ ಇಂದು ಮಾಹಿತಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದಾರೆ.

ಈ ಕಡತವನ್ನು ತಾನು ಅಧ್ಯಯನ ನಡೆಸಬೇಕಿದೆ. ಹಾಗಾಗಿ ಮುಂದಿನ ಎರಡು ವಾರಗಳ ನಂತರ ವಿಚಾರಣೆ ನಡೆಯುತ್ತದೆ. ಈ ಸಂಬಂಧ ಸರಕಾರವು ತನ್ನ ವಾದವನ್ನು ಮಂಡಿಸಲು ಸಿದ್ಧವಾಗಬೇಕು ಎಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ.

ಪಾಮೋಲಿನ್ ಆಮದು ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಥಾಮಸ್, ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ 2ಜಿ ಹಗರಣವನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇಂತಹ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಸಿವಿಸಿಗೆ ನೇಮಕ ಮಾಡಿರುವುದು ಆತಂಕಕಾರಿ ವಿಚಾರ ಎಂದು ಕೇಂದ್ರದ ಕಡತವನ್ನು ನೋಡದೆ ಪ್ರಾಥಮಿಕವಾಗಿ ಅಭಿಪ್ರಾಯಪಟ್ಟಿದೆ.

2ಜಿ ಹಗರಣದ ಕುರಿತು ರಾಜಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದದ್ದು ಯಾಕೆ ಎಂದು ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಇದರಿಂದ ಸರಕಾರ ತೀವ್ರ ಮುಜುಗರಕ್ಕೊಳಗಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ