ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಗನ್‌ ಚಾನೆಲ್‌ ಸೋನಿಯಾ, ಸಿಂಗ್ ಟೀಕೆಗೆ ಕಾಂಗ್ರೆಸ್ ಗರಂ (M Veerappa Moily | Congress | Jaganmohan Reddy | Sonia Gandhi)
Bookmark and Share Feedback Print
 
ಕಾಂಗ್ರೆಸ್ ಬಂಡಾಯ ಸಂಸದ ಜಗನ್ ಮೋಹನ್ ರೆಡ್ಡಿ ಮಾಲಕತ್ವದ ಟಿವಿ ವಾಹಿನಿಯು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಟೀಕಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ, ಕಠಿಣ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸುತ್ತಿದೆ.

ಇದು ಗಂಭೀರ ವಿಚಾರ. ಈ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯ ಮತ್ತು ಆಂಧ್ರಪ್ರದೇಶ ಕಾಂಗ್ರೆಸ್ ಘಟಕದಿಂದ ವರದಿಗಳನ್ನು ಸ್ವೀಕರಿಸಿದ್ದೇನೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಆದರೆ ಜಗನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.

ಈ ವಿಚಾರದ ಬಗ್ಗೆ ರೋಸಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಮನ್ಸ್ ನೀಡಿದ್ದು, ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂಬ ವರದಿಗಳನ್ನೂ ಮೊಯ್ಲಿ ತಳ್ಳಿ ಹಾಕಿದರು.

ಇವೆಲ್ಲದರ ಹೊರತಾಗಿಯೂ ತನ್ನ ನಿಲುವನ್ನು ಬದಲಾಯಿಸದ ಟಿವಿ ಚಾನೆಲ್, ಸಿಂಗ್-ಸೋನಿಯಾ ವಿರುದ್ಧದ ಕಾರ್ಯಕ್ರಮವನ್ನು ಮರು ಪ್ರಸಾರ ಮಾಡಿತ್ತು.

ದಿವಂಗತ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಪುತ್ರ, 38ರ ಹರೆಯದ ಕಡಪ ಸಂಸದನ ಮಾಲಕತ್ವದ ತೆಲುಗು ಸುದ್ದಿವಾಹಿನಿ 'ಸಾಕ್ಷಿ' ತನ್ನ ಒಂದು ಗಂಟೆಯ ಕಾರ್ಯಕ್ರಮದಲ್ಲಿ ಸೋನಿಯಾ ವಿರುದ್ಧ ನೇರ ವಾಗ್ದಾಳಿ ನಡೆಸಿತ್ತು.

ಜತೆಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನೂ ಚಾನೆಲ್ ಗುರಿ ಮಾಡಿತ್ತು.

ಆದರೆ ಇವೆಲ್ಲ ಆರೋಪಗಳನ್ನು 'ಸಾಕ್ಷಿ' ಚಾನೆಲ್ ತಳ್ಳಿ ಹಾಕಿದೆ. ತಾವು ಸೋನಿಯಾ ಅಥವಾ ಸಿಂಗ್ ವಿರುದ್ಧ ಯಾವುದೇ ವರದಿ ಮಾಡಿಲ್ಲ. ಚಾನೆಲ್‌ನ ವ್ಯವಹಾರದಲ್ಲಿ ಜಗನ್ ಮಧ್ಯಪ್ರವೇಶಿಸಿಲ್ಲ. ಇದು ಸಾಕ್ಷಿ ಚಾನೆಲ್‌ನ ಸ್ವಂತ ನಿರ್ಧಾರ ಎಂದು ಚಾನೆಲ್‌ನ ಸಿಇಒ ಪ್ರಿಯದರ್ಶಿನಿ ರಾಮ್ ತನ್ನ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ಇದು ಸೋನಿಯಾ ಗಾಂಧಿ ಅಥವಾ ಮನಮೋಹನ್ ಸಿಂಗ್ ವಿರುದ್ಧದ ವರದಿಯಲ್ಲ. ಇದು ಕಾಂಗ್ರೆಸ್ ಪಕ್ಷದ 125 ವರ್ಷಗಳ ಇತಿಹಾಸವನ್ನು ಆಧರಿಸಿ ತಯಾರಿಸಿದ ಪ್ರಸಕ್ತ ವರದಿ. ಪಕ್ಷವು ಹೇಗೆ ಜನಮಾನಸದಿಂದ ದೂರವಾಗುತ್ತಿದೆ ಎಂಬುದನ್ನು ಹೇಳುವ ವರದಿ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

'ಸಾಕ್ಷಿ' ಸುದ್ದಿವಾಹಿನಿಯನ್ನು ಉದ್ಘಾಟಿಸುವ ಹೊತ್ತಿನಲ್ಲೇ ಜಗನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರು. ಈ ಚಾನೆಲ್ ನಿಷ್ಪಕ್ಷಪಾತಿಯಾಗಿರುತ್ತರೆ, ಸತ್ಯದ ಕಡೆಗಿರುತ್ತದೆ ಮತ್ತು ಶುದ್ಧ ಚಾರಿತ್ರ್ಯವನ್ನು ಹೊಂದಿರುತ್ತದೆ ಎಂದು ಹೇಳಿದ್ದರು. ವಾಹಿನಿಯ ಯಾವುದೇ ಕಾರ್ಯಕ್ರಮಗಳಲ್ಲಿ ಜಗನ್ ಅವರು ಮಧ್ಯಪ್ರವೇಶಿಸುತ್ತಿಲ್ಲ ಎಂದು ರಾಮ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ