ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ದಾರಿ ತಪ್ಪಿಸಿದ್ದು ಕಾನೂನು ಸಚಿವಾಲಯ: ಸ್ವಾಮಿ (Subramanian Swamy | Law Ministry | Mammohan Singh | 2G spectrum scam)
Bookmark and Share Feedback Print
 
2ಜಿ ತರಂಗಾಂತರ ಪ್ರಕರಣದಲ್ಲಿ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ದಾರಿ ತಪ್ಪಿಸಿದ್ದು ವೀರಪ್ಪ ಮೊಯ್ಲಿಯವರ ಕಾನೂನು ಸಚಿವಾಲಯ ಎಂದು ಜನತಾ ಪಕ್ಷದ ವರಿಷ್ಠ ಸುಬ್ರಮಣ್ಯನ್ ಆರೋಪಿಸಿದ್ದಾರೆ.

ನಾನು ಒದಗಿಸಿದ್ದ ಮಾಹಿತಿಗಳ ಆಧಾರದಲ್ಲಿ ಈ ನೆಲದ ಕಾನೂನಿಗೆ ಅನುಗುಣವಾಗಿ ಪ್ರಧಾನ ಮಂತ್ರಿಯವರು ಕ್ರಮ ಕೈಗೊಳ್ಳಬಹುದು ಎಂದು ಸರಕಾರದ ಕಾನೂನು ಅಧಿಕಾರಿಗಳು ಸಲಹೆ ನೀಡಲು ವಿಫಲರಾಗಿರುವುದು ವಿಷಾದನೀಯ ಎಂದು ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಒಂಬತ್ತು ಪುಟಗಳ ಅಫಿಡವಿತ್‌‍ನಲ್ಲಿ ಸ್ವಾಮಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿಯವರು ತನ್ನ ಅಫಿಡವಿತನ್ನು ಶನಿವಾರವೇ ಸಲ್ಲಿಸಿದ್ದರು. ರಾಜಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಸ್ವಾಮಿ ಮಾಡಿದ್ದ ಮನವಿಯ ಕುರಿತು ನಿರ್ಧರಿಸುವ ಮೊದಲು ತಾನು ಕಾನೂನು ಸಚಿವಾಲಯದ ಸಲಹೆ ಕೇಳಿದ್ದೆ. ಸಿಬಿಐ ತನಿಖೆ ನಡೆಯುತ್ತಿರುವುದರಿಂದ, ಅದರ ಫಲಿತಾಂಶ ಬಂದ ನಂತರ ಕ್ರಮ ಕೈಗೊಳ್ಳಬಹುದು ಎಂದು ಸಚಿವಾಲಯ ನನಗೆ ಸಲಹೆ ಮಾಡಿತ್ತು ಎಂದು ಸಿಂಗ್ ಹೇಳಿದ್ದರು.

ಕಾನೂನು ಸಚಿವಾಲಯ ಅಥವಾ ಅವರ ಕಾನೂನು ಸಲಹೆಗಾರ ಅಧಿಕಾರಿಗಳು ಪ್ರಧಾನಿಯವರಿಗೆ ಸೂಕ್ತ ಮಾಹಿತಿ ನೀಡಬೇಕಿತ್ತು. ಆದರೆ ಅವರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಕಾನೂನುಗಳು ಜನ ಸಾಮಾನ್ಯರಿಗೆ ಅರ್ಥವಾಗುವಂತಿರಬೇಕು. ಪ್ರಧಾನಿಯವರು ಆರ್ಥಿಕ ತಜ್ಞರು. ಅವರಿಗೆ ಕಾನೂನುಗಳು ಅರ್ಥವಾಗುವುದಿಲ್ಲ. ಅದೇ ಕಾರಣದಿಂದ ಅವರ ಕಾನೂನು ಸಲಹೆಗಾರರು ತಪ್ಪು ಮಾಹಿತಿ ನೀಡಿದ್ದಾರೆ. ನಾನು ನೀಡಿದ ದೂರಿನ ಆಧಾರದಲ್ಲಿ ಪ್ರಧಾನಿಯವರು ಕ್ರಮ ಕೈಗೊಳ್ಳುತ್ತಿದ್ದರೆ ಈ ಹಗರಣವನ್ನು ತಪ್ಪಿಸಬಹುದಿತ್ತು ಎಂದು ಸುಪ್ರೀಂ ಕೋರ್ಟಿನ ಹೊರಗಡೆ ಮಾತನಾಡುತ್ತಿದ್ದ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ತಾನು ನೀಡಿರುವ ದೂರಿನ ಸಂಬಂಧ ನಿರ್ಧಾರ ಕೈಗೊಳ್ಳುವ ಬದಲು ಪ್ರಧಾನ ಮಂತ್ರಿಯವರ ಕಚೇರಿಯು ರಾಜಾ ಅವರ ಟೆಲಿಕಾಂ ಸಚಿವಾಲಯಕ್ಕೆ ಇದನ್ನು ರವಾನಿಸಿರುವುದು ಸುಪ್ರೀಂ ಕೋರ್ಟಿನ ಈ ಹಿಂದಿನ ಹಲವು ತೀರ್ಪುಗಳ ವಿರುದ್ಧವಾಗಿದೆ ಮತ್ತು ಅಕ್ರಮವಾಗಿದೆ ಎಂದೂ ಸ್ವಾಮಿ ಹೇಳಿದ್ದಾರೆ.

ನಾನು ರಾಜಾ ಅವರ ವಿರುದ್ಧ ಪ್ರಧಾನಿಯವರಿಗೆ ನೀಡಿದ್ದ ದೂರುಗಳನ್ನು ಪ್ರಧಾನಿಯವರು ರಾಜಾ ಅವರಿಗೆ ರವಾನಿಸಿದ್ದರು. ನನ್ನ ವಾದಗಳನ್ನು ಸಮರ್ಥಿಸಿಕೊಳ್ಳಲು ಈ ರೀತಿ ಮಾಡಿದ್ದರು. ಬಳಿಕ ರಾಜಾ 2009ರ ಜೂನ್ 18ರಂದು ಪ್ರಧಾನಿಗೆ ಪತ್ರ ಬರೆದಿದ್ದರು ಎಂದರು.

ಇವೆಲ್ಲವೂ ನ್ಯಾಯಾಲಯದ ತೀರ್ಪುಗಳ ವಿರುದ್ಧವಾಗಿದೆ. ನನ್ನ ಪತ್ರವನ್ನು ರಾಜಾ ಅವರಿಗೆ ರವಾನಿಸಿರುವುದು ಕೂಡ ಅಕ್ರಮವಾಗಿದೆ ಎಂದು ವಿವರಣೆ ನೀಡಿದರು.

ಈ ವಿಚಾರವನ್ನು ಇದೇ ವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ