2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕೆಂಬ ವಿಪಕ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಸಂಸತ್ ಕಾರ್ಯ ಚಟುವಟಿಕೆಯನ್ನು ಸುಗಮಗೊಳಿಸಲು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಕರೆದಿದ್ದ ಸರ್ವಪಕ್ಷಗಳ ಸಭೆ ವಿಫಲವಾಗಿದೆ.
2ಜಿ ಹಗರಣದ ಕುರಿತು ಜೆಪಿಸಿ ತನಿಖೆಯ ಹೊರತು ತಾವು ಯಾವುದೇ ರಾಜಿಗೆ ಸಿದ್ಧರಿಲ್ಲ, ಈ ಕುರಿತ ನಿಲುವು ಬದಲಾವಣೆ ಮಾಡುವುದಿಲ್ಲ ಎಂದು ಪ್ರತಿಪಕ್ಷಗಳಾದ ಎನ್‌ಡಿಎ ಮತ್ತು ಎಡಪಕ್ಷಗಳು ತಮ್ಮ ಪಟ್ಟನ್ನು ಸಡಿಲಿಸದೇ ಇರಲು ನಿರ್ಧರಿಸಿದ ಕಾರಣ ಸಮಸ್ಯೆ ಮುಂದುವರಿದಿದೆ.
2ಜಿ ಹಗರಣದ ಸಂಬಂಧ ಒಂದಕ್ಕಿಂತ ಹೆಚ್ಚು ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಗೆ ಸಾರ್ವಜನಿಕ ಲೆಕ್ಕ ಸಮಿತಿಯನ್ನು ಸೇರಿಸುವ ಕುರಿತು ಸರಕಾರವು ಪ್ರಸ್ತಾಪಿಸಿತು. ಆದರೆ ಇದ್ಯಾವುದಕ್ಕೂ ವಿಪಕ್ಷಗಳು ಮಣಿಯಲಿಲ್ಲ.
ಸರಕಾರದ ಇತರ ಯಾವುದೇ ಪ್ರಸ್ತಾಪಗಳನ್ನು ನಾವು ಸ್ವೀಕರಿಸಲು ಸಿದ್ಧರಿಲ್ಲ ಎಂದು ಸರ್ವಪಕ್ಷಗಳ ಸಭೆಯ ನಂತರ ಲೋಕಸಭೆಯ ವಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಸುಷ್ಮಾ ಹೇಳಿಕೆಗೆ ಇತರ ಪ್ರತಿಪಕ್ಷಗಳು ಕೂಡ ದನಿಗೂಡಿಸಿದವು.
ಸುಮಾರು ಒಂದು ಗಂಟೆಗಳಷ್ಟು ಹೊತ್ತು ನಡೆದ ಸಭೆಯ ನಂತರ ಮಾತನಾಡಿದ ಪ್ರಣಬ್, ತಾನು ಪ್ರಧಾನ ಮಂತ್ರಿಯವರನ್ನು ಸಂಪರ್ಕಿಸಿದ ನಂತರ ಮತ್ತೆ ವಿಪಕ್ಷಗಳನ್ನು ಮಾತನಾಡಿಸುವುದಾಗಿ ಹೇಳಿದರು.
ಸಂಸತ್ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಒಂದು ವಾರದ ಅವಧಿಯಲ್ಲಿ ಕರೆದಿರುವ ಎರಡನೇ ಸರ್ವ ಪಕ್ಷಗಳ ಸಭೆಗೆ ಎಲ್ಲಾ ಪಕ್ಷಗಳ ನಾಯಕರನ್ನು ಮುಖರ್ಜಿ ಆಹ್ವಾನಿಸಿದ್ದರು.
ವರದಿಗಳ ಪ್ರಕಾರ, ಸಂಸತ್ ಕಲಾಪವನ್ನು ಸುಗಮವಾಗಿ ನಡೆಯಲು ಅವಕಾಶ ನೀಡಿ ಎಂದು ಮುಖರ್ಜಿ ಮನವಿ ಮಾಡಿಕೊಂಡರು. ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಕ್ಷಣಾ ಸಚಿವ ಎ.ಕೆ. ಆಂಟನಿ ಕೂಡ ಪಾಲ್ಗೊಂಡಿದ್ದರು.
ಈ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಡಿದ್ದ ಮನವಿಯನ್ನೂ ವಿಪಕ್ಷಗಳು ತಿರಸ್ಕರಿಸಿದ್ದವು.