ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬಿಗ್ ಬಾಸ್'ಗೆ ಮತ್ತೆ ರಿಲ್ಯಾಕ್ಸ್; ಡಿ.3ರವರೆಗೆ ತಡೆ ವಿಸ್ತರಣೆ (Bigg Boss | Bombay High Court | IB ministry | Colors)
Bookmark and Share Feedback Print
 
PTI
ಕಲರ್ಸ್ ರಿಯಾಲಿಟಿ ಶೋ 'ಬಿಗ್ ಬಾಸ್'ಗೆ ಮತ್ತೆ ನಿಟ್ಟಿಸಿರು. ಡಿಸೆಂಬರ್ ಮೂರರವರೆಗೆ ನಿಗದಿತ ಸಮಯದಲ್ಲೇ ಕಾರ್ಯಕ್ರಮವನ್ನು ಪ್ರಸಾರ ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ. ಇದರೊಂದಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶ ಮತ್ತೆ ಮಹತ್ವ ಕಳೆದುಕೊಂಡಿದೆ.

ಕಲರ್ಸ್ ಚಾನೆಲ್‌ನ ಮಾಲಕ 'ವಯಾಕಾಮ್ 18' ಪ್ರಕರಣ ದಾಖಲಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಲು ಕೇಂದ್ರ ಸರಕಾರವು ಕಾಲಾವಕಾಶ ಕೇಳಿದ್ದರಿಂದ ನ್ಯಾಯಾಲಯವು ತಡೆಯಾಜ್ಞೆಯನ್ನು ವಿಸ್ತರಿಸಿದೆ.

ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಶ್ಲೀಲ ಭಾಷೆ ಮತ್ತು ಅಸಭ್ಯ ದೃಶ್ಯಗಳಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಪ್ರಸಾರದ ಮೇಲೆ ನಿರ್ಬಂಧ ಹೇರಿತ್ತು. ರಾತ್ರಿ 11ರಿಂದ ಬೆಳಿಗ್ಗೆ 5ರ ನಡುವೆ ಮಾತ್ರ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಎಂದು ಹೇಳಿತ್ತು. ಇದರ ವಿರುದ್ಧ ಚಾನೆಲ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಇಂದು ತಡೆಯಾಜ್ಞೆಯನ್ನು ವಿಸ್ತರಿಸಿದ ನ್ಯಾಯಮೂರ್ತಿ ಡಿ.ಕೆ. ದೇಶಮುಖ್ ಮತ್ತು ಎನ್.ಡಿ. ದೇಶಪಾಂಡೆ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕೇಂದ್ರ ಸರಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶವನ್ನು ಒದಗಿಸಿತು.

ನಮ್ಮ ಕಾರ್ಯಕ್ರಮದಲ್ಲಿ ಯಾವುದೇ ಆಕ್ಷೇಪಕಾರಿ ದೃಶ್ಯಗಳಿರಲಿಲ್ಲ. ಅಲ್ಲದೆ ಸಚಿವಾಲಯದ ಆದೇಶವು ನಿರ್ದಿಷ್ಟವಾಗಿ ಯಾವ ಭಾಗದಲ್ಲಿ ಅಥವಾ ದಿನ ಅಸಭ್ಯ ಮತ್ತು ದುರಭಿರುಚಿಯ ಕಾರ್ಯಕ್ರಮ ಪ್ರಸಾರವಾಗಿದೆ ಎಂಬುದನ್ನು ಹೇಳಿಲ್ಲ ಎಂದು ಕಲರ್ಸ್ ಚಾನೆಲ್ ಹೈಕೋರ್ಟಿನಲ್ಲಿ ವಾದಿಸಿತ್ತು.

ಈ ಕಾರ್ಯಕ್ರಮದಲ್ಲಿ ಡಬ್ಲ್ಯೂಡಬ್ಲ್ಯೂಇ ಪಟು ಖಲಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಹಾಲಿವುಡ್ ನಟಿ ಪಮೇಲಾ ಆಂಡರ್ಸನ್ ಬಿಗ್ ಬಾಸ್ ಹೌಸಿನಲ್ಲಿ ಮೂರು ದಿನ ಕಳೆದಿದ್ದರು.

ಈ ಕಾರ್ಯಕ್ರಮದ ಜತೆ ಎನ್‌ಡಿಟಿವಿ ಇಮ್ಯಾಜಿನ್ ಪ್ರಸಾರ ಮಾಡುತ್ತಿದ್ದ ರಾಖಿ ಸಾವಂತ್ ನಡೆಸಿಕೊಡುತ್ತಿದ್ದ 'ರಾಖಿ ಕಾ ಇನ್ಸಾಫ್' ಕಾರ್ಯಕ್ರಮದ ಮೇಲೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ಬಂಧ ಹೇರಿತ್ತು.
ಸಂಬಂಧಿತ ಮಾಹಿತಿ ಹುಡುಕಿ