ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಎಂ ಸದ್ಯಕ್ಕೆ ಸೇಫ್?: ಗಡ್ಕರಿ ಜತೆ ಮಾತುಕತೆಗೆ ಕ್ಷಣಗಣನೆ (Yaddyurappa | Karnataka Crisis | BJP | Nitin Gadkari | BJP High Command)
Bookmark and Share Feedback Print
 
PTI
ಕಳೆದೆರಡು ದಿನಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಭವಿಷ್ಯ ದೆಹಲಿಯಲ್ಲಿ ತೂಗುತಕ್ಕಡಿಯಲ್ಲಿರುವಂತೆಯೇ, ರಾಜ್ಯದ ಬಿಜೆಪಿ ಸಂಸದರ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿರುವ ಮುಖ್ಯಮಂತ್ರಿ, ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರೊಂದಿಗೆ ಸಮಾಲೋಚನೆಗೆ ಸಜ್ಜಾಗುತ್ತಿದ್ದಾರೆ. ಮೂಲಗಳ ಪ್ರಕಾರ, ಸೋಮವಾರ ಯಡಿಯೂರಪ್ಪ ಅವರ ಕೈಗೆ ಸಿಗದೆ ತುರ್ತು ಕಾರ್ಯ ನಿಮಿತ್ತ ನಾಗ್ಪುರಕ್ಕೆ ತೆರಳಿದ್ದ ನಿತಿನ್ ಗಡ್ಕರಿ, ಆರೆಸ್ಸೆಸ್ ಜೊತೆ ಮಾತುಕತೆ ನಡೆಸಿದ್ದು, ಅಲ್ಲೇ ಯಡಿಯೂರಪ್ಪ ಭವಿಷ್ಯ ನಿರ್ಧಾರವಾಗಿಬಿಟ್ಟಿದೆ ಎಂದು ಮೂಲಗಳು ಅಂದಾಜಿಸಿವೆ.

ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ, ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಅವರು ರಾಜ್ಯದ ಸಂಸದರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯದ ಎಲ್ಲ ಸಂಸದರೂ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿ ಮಾತನಾಡುವುದು ಬಹುತೇಕ ಖಚಿತವಾಗಿದೆ. ಮತ್ತು ಸಿಎಂ ಅವರ ತಲೆದಂಡವಾಗದಂತೆ ವರಿಷ್ಠರ ಮೇಲೆ ಒತ್ತಡ ಹೇರಲು ರಾಜ್ಯದ ಸಂಸದರು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆರೆಸ್ಸೆಸ್ ಸಂದೇಶ ಹೊತ್ತು ಬರಲಿದ್ದಾರೆಯೇ ಗಡ್ಕರಿ?
ಡಿಸೆಂಬರ್ 2ರಂದು ಮಗನ ಮದುವೆ ನಡೆಯುವ ನಿಮಿತ್ತ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗಡ್ಕರಿ ನಾಗ್ಪುರಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದ್ದರೂ, ಅವರು ಆರೆಸ್ಸೆಸ್ ನಾಯಕರನ್ನು ಭೇಟಿಯಾಗಿದ್ದರು ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ.

ಇನ್ನೊಂದೆಡೆ, ಈ ಕ್ಷಣದವರೆಗೂ ತನ್ನ ರಾಜೀನಾಮೆಯನ್ನು ಯಾರೂ ಕೇಳಿಲ್ಲ, ತಾನೊಬ್ಬ ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ನಿಷ್ಠಾವಂತ ಕಾರ್ಯಕರ್ತ ಎಂದು ಯಡಿಯೂರಪ್ಪ ಹೇಳಿಕೊಂಡಿರುವುದು ಕೂಡ ಈ ಮಾತಿಗೆ ಪುಷ್ಟಿ ನೀಡುತ್ತಿದೆ. ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಉಳಿಯಬೇಕು ಎಂಬ ಇರಾದೆಯಲ್ಲಿದೆ ಆರೆಸ್ಸೆಸ್.

ಹೈಕಮಾಂಡ್ ಮಾತು ಧಿಕ್ಕರಿಸಿಲ್ಲ ಎಂದ ಸಿಎಂ...
ಇದಕ್ಕೆ ಮೊದಲು ವೆಂಕಯ್ಯ ನಾಯ್ಡು ನಿವಾಸದಲ್ಲಿ ಯಡಿಯೂರಪ್ಪ ಗಂಭೀರವಾಗಿ ಮಾತುಕತೆ ನಡೆಸಿದ್ದರು. ಬಳಿಕ ಮಂಗಳವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಷ್ಟ್ರೀಯ ನಾಯಕರ ಮಾತನ್ನು ಜೀವನದೆಲ್ಲಿಗೂ ಉಲ್ಲಂಘಿಸಿಲ್ಲ, ಉಲ್ಲಂಘಿಸುವುದೂ ಇಲ್ಲ. 40 ವರ್ಷದಿಂದ ಸಾಮಾನ್ಯ ಕಾರ್ಯಕರ್ತನಾಗಿ, ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೇನೆ. ಕಾರ್ಯಕರ್ತರ ಸಹಕಾರವಿದೆ. ಜನತೆ ನಮ್ಮ ಜತೆಗಿದೆ. ಕೇಂದ್ರೀಯ ನಾಯಕ ಮಾತು ಧಿಕ್ಕರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವುದು ವಿರೋಧ ಪಕ್ಷಗಳ ಪಿತೂರಿ ಎಂದರು. ಪಕ್ಷವು ಏನು ಹೇಳುತ್ತದೆಯೋ, ಅದನ್ನು ಕೇಳಲು ಸಿದ್ಧನಿದ್ದೇನೆ ಎಂದೂ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರು ಕರ್ನಾಟಕ ಭವನದಲ್ಲಿ ಸಂಸದರೊಂದಿಗೆ ಸಮಾಲೋಚನೆ ನಡೆಸಿ ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಾಜ್ಯ ಸಂಸದರು ಯಡಿಯೂರಪ್ಪ ಪರ ವಕಾಲತ್ತು ನಡೆಸಲಾರಂಭಿಸಿದ್ದಾರೆ.

ಸೇಫ್ ಹೇಗೆ?
ಈಗಾಗಲೇ ಕುರ್ಚಿ ಬಿಡಲು ನಿರಾಕರಿಸಿರುವ ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದರೆ, ತನ್ನ ನೇತೃತ್ವದಲ್ಲಿ ಚುನಾವಣೆ ಗೆದ್ದಿದ್ದೇವೆ, ,ಜನಗೇ ರಾಜ್ಯದ ಜನತೆ ಜನಾದೇಶ ನೀಡಿದ್ದಾರೆ ಎಂದೆಲ್ಲಾ ಹೇಳಿರುವ ಅವರು ಬಂಡಾಯವೇಳುವ ಲಕ್ಷಣಗಳಿವೆ. ಇದು ಖಂಡಿತವಾಗಿಯೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎಂಬುದರ ಅರಿವು ಬಿಜೆಪಿ ಹೈಕಮಾಂಡ್‌ಗಿದೆ. ಅದೇ ರೀತಿ, ಯಡಿಯೂರಪ್ಪ ಪಕ್ಷದಿಂದ ದೂರವಾದರೆ, ಅವರ ಬೆಂಬಲಿಗ ಶಾಸಕರೂ ಸರಕಾರದಿಂದ ಹೊರಬಂದರೆ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಪತನವಾಗುವುದು ನಿಶ್ಚಿತ ಎಂಬ ಅಂಶವೂ ಹೈಕಮಾಂಡ್ ಪರಿಗಣನೆಯಲ್ಲಿದೆ. ಇದಲ್ಲದೆ, ಈಗಾಗಲೇ ರಾಜ್ಯದಲ್ಲಿ ಬಲಿಷ್ಠ ಓಟಿನ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯದ ಮಠಾಧೀಶರೂ ಬಹಿರಂಗವಾಗಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ, ಯಡಿಯೂರಪ್ಪ ಸದ್ಯಕ್ಕೆ ಸೇಫ್ ಎಂದೇ ಅಂದಾಜಿಸಬಹುದಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ