ಮಾಯಾವತಿಯವರ ಬಹುಜನ ಸಮಾಜ ಪಕ್ಷದ ವಿರುದ್ಧ ಬಿಜೆಪಿ ನಾಯಕ ವರುಣ್ ಗಾಂಧಿ ನಡೆಸಿರುವ ವಾಗ್ದಾಳಿಯ ಪರಿಯಿದು. ಮಾಯಾ ಸರಕಾರದ ಸಚಿವರು 10ರಿಂದ 20 ಕೇಜಿಗಳಷ್ಟು ತೂಕ ಹೆಚ್ಚಿಸಿಕೊಂಡಿದ್ದು, ಅವರಿಂದಾಗಿ ಅವರ ಪಕ್ಷದ ಚಿಹ್ನೆಯಾಗಿರುವ ಆನೆ ತುಂಬಾ ಸಮಯ ನಿಲ್ಲುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ. ರಾಜ್ಯದ ಸಚಿವರುಗಳ ಅಕ್ರಮಗಳಿಂದಾಗಿ ಅವರ ಪಕ್ಷ ತುಂಬಾ ದಿನ ಆಡಳಿತದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದರು.
ದುರಾಡಳಿತ ಮತ್ತು ಭ್ರಷ್ಟಾಚಾರಗಳಿಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಗಬ್ಬೆದ್ದು ಹೋಗಿದೆ. ಮಾಯಾವತಿ ಸರಕಾರದ ಸಚಿವರು 10-20 ಕೇಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಅವರಿಂದಾಗಿ ಬಿಎಸ್‌ಪಿಯ ಆನೆ ಹೆಚ್ಚು ಕಾಲ ನಿಲ್ಲದು ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಲೇವಡಿ ಮಾಡಿದರು.
ಉತ್ತರ ಪ್ರದೇಶ ಪೊಲೀಸರ ವಿರುದ್ಧವೂ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬಡವರ ಮೇಲೆ ದೌರ್ಜನ್ಯ ಎಸಗುವ ಪೊಲೀಸರು, ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ತಮ್ಮ ಉನ್ನತಾಧಿಕಾರಿಗಳಿಗೆ ನಿರ್ದಿಷ್ಟ ಮೊತ್ತವನ್ನು ಕಳುಹಿಸುವ ಒತ್ತಡ ಅವರ ಮೇಲಿರುವುದರಿಂದ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮಾಜವಾದಿ ಪಕ್ಷದ ವಿರುದ್ಧವೂ ಹರಿ ಹಾಯ್ದಿರುವ ಅವರು, ಆ ಪಕ್ಷದ ಎಲ್ಲಾ ಗೂಂಡಾಗಳು ಆನೆ ಸವಾರಿ (ಬಿಎಸ್‌ಪಿ ಚಿಹ್ನೆ) ಮಾಡುತ್ತಿದ್ದಾರೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಟೀಕಿಸಿದರು.
ಗಂಗಾ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಗಳ ಹೆಸರಿನಲ್ಲಿ ರಾಜ್ಯ ಸರಕಾರವು ರೈತರ ಕೃಷಿ ಭೂಮಿಯನ್ನು ವಶ ಪಡಿಸಿಕೊಳ್ಳುತ್ತಿದೆ. ಇಂತಹ ಯೋಜನೆಗಳಿಂದ ದೊಡ್ಡ ದೊಡ್ಡ ಕಂಪನಿಗಳು ಭಾರೀ ಲಾಭ ಮಾಡಿಕೊಳ್ಳುತ್ತಿವೆ ಎಂದೂ ಆರೋಪ ಮಾಡಿದರು.