ಛತ್ತೀಸ್‌ಗಢದ ನಕ್ಸಲ್ ಪೀಡಿತ ದಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆ ನಡೆಸಿದ ಭಾರೀ ಎನ್‌ಕೌಂಟರಿಗೆ ಕನಿಷ್ಠ ಒಂಬತ್ತು ನಕ್ಸಲರು ಬಲಿಯಾಗಿದ್ದಾರೆ.
ಖಚಿತ ಮಾಹಿತಿಗಳ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್‌ನ 111 ಬೆಟಾಲಿಯನ್, ಎರಡು ವಿಶೇಷ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸ್ ಇಲಾಖೆಯ ನಾಲ್ವರು ಪೊಲೀಸರು ಜಗರಗುಂಡಾ ಅರಣ್ಯ ಪ್ರದೇಶವನ್ನು ಬೆಳಿಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಸುತ್ತುವರಿದಿದ್ದರು.
ಇದುವರೆಗೆ ಒಂಬತ್ತು ನಕ್ಸಲರ ಕಳೇಬರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಘಟನೆ ಕುರಿತು ಮಾಹಿತಿ ನೀಡಿರುವ ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಎಸ್.ಆರ್.ಪಿ. ಕಲ್ಲೂರಿ ತಿಳಿಸಿದ್ದಾರೆ.
ಗುಂಡಿನ ಚಕಮಕಿ ನಡೆದಿರುವುದು ದಟ್ಟಾರಣ್ಯದಲ್ಲಿ. ಇದರಿಂದಾಗಿ ಭದ್ರತಾ ಪಡೆಗಳಲ್ಲಿ ಆಗಿರುವ ಸಾವು-ನೋವಿನ ಬಗ್ಗೆ ಯಾವುದೇ ವರದಿ ಬಂದಿಲ್ಲ.
ಎನ್‌ಕೌಂಟರ್ ನಡೆಸಿದ ಬಳಿಕ ಸ್ಥಳದಲ್ಲಿದ್ದ ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ನಕ್ಸಲರು ದಂತೇವಾಡದಲ್ಲಿ 75 ಸಿಆರ್‌ಪಿಎಫ್ ಸಿಬ್ಬಂದಿಗಳ ಮಾರಣಹೋಮ ನಡೆಸಿದ ಬಳಿಕ ಭದ್ರತಾ ಸಿಬ್ಬಂದಿಗಳು ಭಾರೀ ಕೂಂಬಿಂಗ್ ನಡೆಸುತ್ತಿವೆ. ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕಲು ಶತಯತ್ನಗಳನ್ನು ನಡೆಸುತ್ತಿವೆ. ಅದರಂಗವಾಗಿ ಇದೀಗ ಜಾಗರೂಕತೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಯಶಸ್ಸು ಪಡೆದಿವೆ.