ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ಪುಢಾರಿಗಳ ಪುಂಡಾಟಕ್ಕೆ 75 ಕೋಟಿ ರೂ. ಪೋಲು!
(Disruption of Parliament | Winter session | Lok Sabha | Congress)
ಸಂಸತ್ ಅಧಿವೇಶನವೇನೋ ಆರಂಭವಾಗಿದೆ. ಮಹತ್ವದ ಮಸೂದೆಗಳನ್ನು ಅಂಗೀಕರಿಸುವುದು, ಹಗರಣಗಳ ಬಗ್ಗೆ ತನಿಖೆ ನಡೆಸುವುದು, ಚರ್ಚಿಸುವುದನ್ನು ಬಿಟ್ಟು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಪರಸ್ಪರ ಹಗ್ಗ ಜಗ್ಗಾಟದಲ್ಲಿ ತೊಡಗಿವೆ. ಒಟ್ಟಾರೆ ಇದರಿಂದ ಬಡವಾಗಿರುವುದು ದೇಶ. ಕಳೆದ ಹತ್ತು ದಿನಗಳಲ್ಲಿ ಬೊಕ್ಕಸಕ್ಕೆ 76.5 ಕೋಟಿ ರೂಪಾಯಿಗಳ ನಷ್ಟವಾಗಿದೆ.
ನವೆಂಬರ್ ಒಂಬತ್ತರಂದು ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 13ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸಂಸತ್ ಕಾರ್ಯನಿರ್ವಹಿಸುವ ಒಟ್ಟು ದಿನಗಳು ಕೇವಲ 24. ಅದರಲ್ಲಿ ಈಗಾಗಲೇ 10 ದಿನಗಳು (ನವೆಂಬರ್ 23ರವರೆಗೆ) ಕಳೆದು ಹೋಗಿವೆ. ಇಷ್ಟು ದಿನದಲ್ಲಿ ಸಂಸತ್ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆಯೇ ಎಂಬ ಪ್ರಶ್ನೆ ಬಂದರೆ, ಇಲ್ಲ.
WD
ಸಂಸತ್ತಿನ ಉಭಯ ಸದನಗಳಿಗೆ (ಲೋಕಸಭೆ ಮತ್ತು ರಾಜ್ಯಸಭೆ) ಸರಕಾರ ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ ಮಾಡುವ ವೆಚ್ಚ 7.65 ಕೋಟಿ ರೂಪಾಯಿಗಳು. ಅಂದರೆ ಕಳೆದ ಹತ್ತು ದಿನಗಳಲ್ಲಿ ಪೋಲಾಗಿರುವ ಒಟ್ಟು ಹಣ 76.5 ಕೋಟಿ ರೂಪಾಯಿಗಳಿಗೂ ಹೆಚ್ಚು.
ಅಧಿವೇಶನದ ಇತರ ಅಂಕಿ-ಅಂಶಗಳತ್ತ ಕಣ್ಣು ಹಾಯಿಸುವುದಾದರೆ, ಕಳೆದ ಎಂಟು ದಿನಗಳಲ್ಲಿನ ಲೋಕಸಭಾ ಕಲಾಪದಲ್ಲಿನ 48 ಫಲಪ್ರದವಾಗಬಹುದಾದ ಗಂಟೆಗಳಲ್ಲಿ (ಎಂಟು ದಿನಗಳ ಅಂಕಿ-ಅಂಶ ಮಾತ್ರ ಲಭ್ಯವಿದೆ) ಬಳಕೆಯಾಗಿರುವುದು ಕೇವಲ 5.3 ಗಂಟೆಗಳು ಮಾತ್ರ. ರಾಜ್ಯಸಭೆಯ 40 ಗಂಟೆಗಳಲ್ಲಿ ಉಪಯೋಗಕ್ಕೆ ಬಂದಿರುವುದು 0.9 ಗಂಟೆಗಳು.
ಈ ಹಿಂದಿನ ಬಜೆಟ್ ಅಧಿವೇಶನ ಮತ್ತು ಮಳೆಗಾಲದ ಅಧಿವೇಶನದ ಕಥೆಯೂ ಇದೇ ಆಗಿತ್ತು. ಇದೇ ವರ್ಷದ ಬಜೆಟ್ ಅಧಿವೇಶನದ ಮೊದಲ ಎಂಟು ದಿನ 30.4 ಗಂಟೆಗಳು ಹಾಗೂ ಮಳೆಗಾಲದ ಅಧಿವೇಶನದಲ್ಲಿ 41 ಗಂಟೆಗಳು ವ್ಯರ್ಥವಾಗಿದ್ದವು. ಆದರೆ ಚಳಿಗಾಲದ ಅಧಿವೇಶನ ಅದನ್ನು ಮೀರಿಸಿದೆ. ಈಗಾಗಲೇ 81 ಗಂಟೆಗಳು (ಎಂಟು ದಿನಗಳಲ್ಲಿ) ವ್ಯರ್ಥವಾಗಿವೆ.
ಈ ಬಾರಿ ಕಲಾಪಕ್ಕೆ ಅಡ್ಡಿಯಾಗಿರುವುದು 2ಜಿ ಹಗರಣ. ಅವ್ಯವಹಾರದ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎನ್ನುವುದು ಪ್ರತಿಪಕ್ಷಗಳ ಪಟ್ಟು. ಅದು ಸಾಧ್ಯವಿಲ್ಲ ಎನ್ನುವುದು ಸರಕಾರದ ಜಗ್ಗಾಟ. ಎರಡೂ ಬಣಗಳು ಬಗ್ಗುತ್ತಿಲ್ಲ. ಪರಿಣಾಮ ದೇಶ ಭಾರೀ ನಷ್ಟಕ್ಕೊಳಗಾಗುತ್ತಿದೆ.
ಇದಿಷ್ಟೇ ಅಲ್ಲ, ಕೆಲವು ಸಂಸದರು ಸಂಸತ್ತಿನತ್ತ ಮುಖವನ್ನೇ ಹಾಕಿಲ್ಲ. ಅವರ ಮುಂದಿರುವ ಕಾರಣ ಮದುವೆ-ಮುಂಜಿ ಮತ್ತು ರಾಜಕೀಯ. ಡಿಎಂಕೆ ನಾಯಕ ಎಂ.ಕೆ. ಅಳಗಿರಿ ಪುತ್ರ ಮತ್ತು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ಪುತ್ರನ ಮದುವೆ ಹಿನ್ನೆಲೆಯಲ್ಲಿ ಇಬ್ಬರೂ ಹಲವರು ಕಲಾಪಕ್ಕೆ ಚಕ್ಕರ್ ಹಾಕಿದ್ದಾರೆ.
ಬಿಹಾರ ಸಂಸದರಾದ ಲಾಲೂ ಪ್ರಸಾದ್ ಮತ್ತು ಶರದ್ ಯಾದವ್ ರಾಜ್ಯದ ಚುನಾವಣೆ ಹಿನ್ನೆಲೆಯಲ್ಲಿ ಕಾಣೆಯಾಗಿದ್ದರೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲದಲ್ಲಿನ ಹಲವು ರೈಲ್ವೇ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸುವುದರಲ್ಲೇ ವ್ಯಸ್ತರಾಗಿದ್ದಾರೆ.
ಬಿಜೆಪಿಯ ಹಲವು ಸಂಸದರು ಆಗಾಗ ಸಂಸತ್ತಿನಲ್ಲಿ ಕಾಣಿಸಿಕೊಳ್ಳಲು ಕಾರಣ ಕರ್ನಾಟಕದ ರಾಜಕೀಯ ಬೆಳವಣಿಗೆಗಳು. ಈ ಕುರಿತು ಚರ್ಚೆ ನಡೆಸುವುದು, ವಶೀಲಿಬಾಜಿ ನಡೆಸುವ ಸಲುವಾಗಿ ಹಲವರು ದೂರ ಉಳಿದುಕೊಂಡಿದ್ದಾರೆ.